ಮೈಸೂರು

ಕೀಳು, ಕಳಂಕಗಳನ್ನೇ ಮೆಟ್ಟಿ ನಿಂತು ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಕನಕದಾಸರು: ಪ್ರೊ. ಡಾ.ವಸಂತಕುಮಾರ್

ಅವಮಾನಗಳನ್ನು ಯಾರು ಮೆಟ್ಟಿ ನಿಲ್ಲುತಾರೋ ಅವರಿಗೆ ತಲ್ಲಣಗಳಿಂದ ಮುಕ್ತಿ ದೊರೆಯಲು ಸಾಧ್ಯ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ವಸಂತಕುಮಾರ್ ತಿಳಿಸಿದರು.

ಮಹಾರಾಣಿ ವಿಜ್ಞಾನ ಕಾಲೇಜು ವತಿಯಿಂದ ಗುರುವಾರ ಕಾಲೇಜಿನ ಎವಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತ ಕವಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕನಕದಾಸರು ಜಾತಿ ಸಂಘರ್ಷವನ್ನು ಅನುಭವಿಸಿ ಮೇಲೆ ಬಂದವರು. ಕೀಳು, ಕಳಂಕಗಳನ್ನೇ ಮೆಟ್ಟಿ ನಿಂತು ಸಮಾಜದ ಏಳಿಗೆಗಾಗಿ ಶ್ರಮಿಸಿದವರು. ಅದಕ್ಕಾಗಿ ಕುಲಕುಲವೆಂದು ಹೊಡದಾಡದಿರಿ ಎಂಬ ವಚನದ ಮೂಲಕ ಇಡೀ ಸಮಾಜಕ್ಕೆ ಎಲ್ಲರೂ ಒಂದೇ ಎಂಬ ತತ್ವವನ್ನು ಸಾರಿದ್ದಾರೆ ಎಂದರು.

ಸಮಾಜದಲ್ಲಿ ಇಂದಿಗೂ ತಲ್ಲಣಗಳಲ್ಲಿಯೇ ಮನುಷ್ಯ ಕಾಲ ಕಳೆಯುತ್ತಿದ್ದಾನೆ. ತಲ್ಲಣಗಳಿಂದ ಮುಕ್ತಿ ಹೊಂದಬೇಕಾದರೇ ಮನವನ್ನು ಮುಟ್ಟಬೇಕು. ಇಂದು ಎಲ್ಲರೂ ತನುವನ್ನು ಮುಟ್ಟುತ್ತಿದ್ದಾರೆ ಎಂದ ಅವರು, ಮನ ಬೆಳಗುವುದು ಭಕ್ತಿಯಿಂದ. ಭಕ್ತಿ ಎಂದರೆ ದ್ವಂದ್ವವಿಲ್ಲದ ಮನಸ್ಸು ಎಂದರ್ಥ. ಆ ಭಕ್ತಿ ತುಂಬಿದ ಮನಸ್ಸಲ್ಲಿ ಪ್ರೀತಿ ಅಡಗಿದಾಗ ನೆಮ್ಮದಿಯ ಜೀವನ ಕಾಣಲು ಸಾಧ್ಯ. ಆಗ ಮನ ಬೆಳಗುತ್ತದೆ, ತಲ್ಲಣಗಳಿಂದ ಮುಕ್ತಿ ಹೊಂದುತ್ತೇವೆ ಎಂದು ತಿಳಿಸಿದರು.

ನೆಮ್ಮದಿಯನ್ನು ನಾವೇ ಕಂಡುಕೊಳ್ಳಬೇಕು. ಆ ನೆಮ್ಮದಿ ಪ್ರೀತಿಯಲ್ಲಿ ಅಡಗಿದೆ. ಪ್ರೀತಿಯನ್ನು ಕಳೆದುಕೊಂಡ ಮನಸ್ಸು ತಲ್ಲಣಗಳನ್ನು ಅನುಭವಿಸಲೇಬೇಕು. ಕನಕದಾಸನಿಗೆ ಆದಿಕೇಶ ಸಿಕ್ಕಿದ್ದು ಪ್ರೀತಿಯಿಂದಲೇ, ಪ್ರಸ್ತುತ ಸಮಾಜದಲ್ಲಿ ಖಿನ್ನತೆ, ಪ್ರೀತಿಯ ಕೊರತೆಯಿಂದ ತೊಳಲಾಡುತ್ತಿದೆ. ಆತಂಕ, ಭಯ, ಕೋಪ, ಮಾನಸಿಕ ಅಸ್ವಸ್ಥದಿಂದ ಮನಸ್ಸು ಜರ್ಜರಿತವಾಗಿದೆ. ಆದ್ದರಿಂದ, ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದು, ಬದುಕನ್ನು ಸುಂದರಗೊಳಿಸಿಕೊಳ್ಳಬೇಕಾಗಿದೆ. ಇದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ, ಸಮಾಜಕ್ಕೆ ಭರವಸೆ ಹುಟ್ಟಿಸುವುದಕ್ಕಾಗಿ ಕನಕದಾಸ ಪ್ರಸ್ತುತವಾಗಿದ್ದಾರೆ ಎಂದರು.

ಕನಕದಾಸರು ಮಹಾ ರಸಿಕ ಹಾಗೂ ಪರಾಕ್ರಮಿ. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಯಾವುದೇ ಯುದ್ಧವನ್ನು ಅಂಜದೇ ಗೆಲ್ಲುತ್ತಿದ್ದರು. ಆದರೆ ಒಂದು ಸಲ ಯುದ್ಧದಲ್ಲಿ ಸೋತಾಗ ದೊರೆತನವನ್ನು ಬಿಡಿಸಿ, ಸೇವಕನನ್ನು ಮಾಡಿದೆ ಹರಿಯೇ ಎಂದು ನೆನೆಯುತ್ತಾರೆ. ಆ ಯುದ್ಧದ ಸೋಲೇ ಕನಕದಾಸರ ಜೀವನದ ತಿರುವಾಯಿತು. ಕೇವಲ ತಾವು ಮಾತ್ರ ಸಮಾಧಾನದಲ್ಲಿರಲು ಬಯಸಿದವರಲ್ಲ. ಸಮಾಜವನ್ನು ಸಮಾಧಾನದಲ್ಲಿರಿಸುವಂತೆ ಬಯಸಿದವರು. ಅವರ ಚಿಂತನೆ, ವಚನಗಳ ಮೂಲಕ ಸಮಾಜದ ಏಳಿಗೆಯನ್ನು ತೋರಿಸಿದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲ ಕೋಂಡರಸಯ್ಯ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಪದ್ಮನಾಭ, ಖಜಾಂಚಿ ಬಾಲಕೃಷ್ಣ, ಡಿ.ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: