ಕರ್ನಾಟಕ

ಕರಿಕೆಯಲ್ಲಿ 9ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ರಾಜ್ಯ(ಮಡಿಕೇರಿ) ಡಿ.28 :-  ಮಡಿಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.30ರಂದು ಕೊಡಗಿನ ಗಡಿಭಾಗ ಕರಿಕೆಯಲ್ಲಿ ನಡೆಯಲಿದ್ದು, ಎಲ್ಲಾ ರೀತಿಯ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅವರ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಗುರುವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್, ಡಿ.30ರ ಬೆಳಗ್ಗೆ 8 ಗಂಟೆಯಿಂದ ರಾತ್ರಿವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಅಂದು ಪೂರ್ವಾಹ್ನ 8 ಗಂಟೆಗೆ ಭಾಗಮಂಡಲ ಆರಕ್ಷಕ ಠಾಣೆ ಉಪ ಪೊಲೀಸ್ ನಿರೀಕ್ಷಕ ಸದಾಶಿವಯ್ಯ ಅವರು ರಾಷ್ಟ್ರ ಧ್ವಜಾರೋಹಣ ಹಾಗೂ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ನಾಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಬಳಿಕ ನಾಡಿನ ಹಿರಿಯ ಸಾಧಕರ ಹೆಸರಿನಲ್ಲಿ ನಿರ್ಮಿಸಲಾಗಿರುವ ಪದ್ಮನಾಭ ಸರಳಾಯ ದ್ವಾರ, ಕಾಟೂರು ನಾರಾಯಣ ನಂಬಿಯಾರ್ ದ್ವಾರ, ಡಾ. ಬೇಕಲ್ ಸೋಮನಾಥ್ ದ್ವಾರಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆ. 9 ಗಂಟೆಗೆ ಎಳ್ಳುಕೊಚ್ಚಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಇದಕ್ಕೆ ತಾಲೂಕು ತಹಶೀಲ್ದಾರ್ ಕುಸುಮ ಚಾಲನೆ ನೀಡಲಿದ್ದಾರೆ. ವಿವಿಧ ಕಲಾತಂಡಗಳ ಸಹಿತ ಸುಮಾರು 2 ಕಿ.ಮೀ ದೂರದ ಮೆರವಣಿಗೆ ನಡೆಯಲಿದ್ದು, ಬಳಿಕ ಕೋಡಿ ರಾಘವಯ್ಯ ಪುಸ್ತಕ ಮಳಿಗೆಯನ್ನು ತಾ.ಪಂ. ಸದಸ್ಯೆ ಸಂಧ್ಯಾ ಉದ್ಘಾಟಿಸಿದರೆ, ಜಿ.ಟಿ.ನಾರಾಯಣರಾವ್ ಸಭಾಂಗಣವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಕವಿತಾ ಪ್ರಭಾಕರ್, ಪಂಜೆ ಮಂಗೇಶರಾಯ ವೇದಿಕೆಯನ್ನು ಕರಿಕೆ ಗ್ರಾ.ಪಂ. ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.

ಪೂರ್ವಾಹ್ನ 11ಗಂಟೆಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ.ಎ.ಷಂಶುದ್ದೀನ್ ನಿಕಟಪೂರ್ವ ಅಧ್ಯಕ್ಷರ  ನುಡಿಯಾಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಹಂಪಿ ಕನ್ನಡ ವಿವಿಯ ಪ್ರೊ. ಎ.ವಿ.ನಾವಡ ಆಗಮಿಸಲಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಈಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ರಮೇಶ್, ತಾಲೂಕು ಕಸಾಪ ಕಾರ್ಯದರ್ಶಿ  ಕೂಡಕಂಡಿ ದಯಾನಂದ, ಕೋಶಾಧ್ಯಕ್ಷ ಬಾಳೆಕಜೆ ಯೋಗೇಂದ್ರ ಹಾಗೂ ನಿರ್ದೇಶಕಿ ಕೇಕಡ ಇಂದುಮತಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: