ಮೈಸೂರು

ಕನಕದಾಸರು ಸಮಾನತೆಯ ತತ್ವ ಸಾರಿದ ಶ್ರೇಷ್ಠ ದಾರ್ಶನಿಕ: ರಾಜಣ್ಣ

ಪ್ರಸ್ತುತ ಪುರಂದರ ದಾಸರ ಕೃತಿಗಳಿಗೆ ಸಿಗುತ್ತಿರುವ ಮಾನ್ಯತೆ ಅವರ ಸಮಕಾಲೀನರಾದ ಕನಕದಾಸರ ಕೃತಿಗಳಿಗೆ ದೊರೆಯುತ್ತಿಲ್ಲ ಎಂದು ಜಾತ್ಯತೀತ ಜನತಾದಳದ ನಗರ ಅಧ್ಯಕ್ಷ ರಾಜಣ್ಣ ಬೇಸರ ವ್ಯಕ್ತಪಡಿಸಿದರು.

ನಗರದ ಜಾತ್ಯಾತೀತ ಜನತಾದಳದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಮಾತಾಗಿರುವ ಜನಪ್ರಿಯ ತಿರುಕನ ಕನಸು ಪದ್ಯವನ್ನು ಮುಪ್ಪಿನ ಷಡಕ್ಷರಿಯವರು ಬರೆದಿದ್ದಾರೆ ಎಂದು ನಮೂದಿಸಿರುವುದು ಖಂಡನೀಯ. ಜಾತಿಯ ಕಾರಣದಿಂದಾಗಿ ಬರೆದ ಕವಿಯನ್ನೇ ಮರೆಮಾಚುವ ವಂಚಕ ಮನಸ್ಸುಗಳು ಸಮಾಜದಲ್ಲಿ ರಾರಾಜಿಸುತ್ತಿವೆ. ಸಮಾಜದಲ್ಲಿ ಕಂಡು ಬರುವ ಜಾತಿಯತೆ, ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ, ಶೋಷಣೆ, ಅನೀತಿಯಂತಹ ಸಾಮಾಜಿಕ ರೋಗಗಳಿಗೆ ಕನಕದಾಸರು ನೀಡಿರುವ ತತ್ವಗಳು ಔಷಧದಂತೆ ಕಾರ್ಯ ಮಾಡುತ್ತವೆಂದು  ಹೇಳಿದರು.

ಕನಕದಾಸರು ಭಕ್ತಿಪಂಥದ ಪ್ರಮುಖ ಸಂತ ಕವಿ ಹಾಗೂ ದಾರ್ಶನಿಕರು. ಈ ನಾಡು ಕಂಡ ಶ್ರೇಷ್ಠ ಮಹನೀಯರಲ್ಲಿ ಒಬ್ಬರಾಗಿದ್ದು, ಭಕ್ತರಾಗಿ, ಸಮಾಜ ಸುಧಾರಕರಾಗಿ, ದಾರ್ಶನಿಕರಾಗಿ, ಸಂತರಾಗಿ, ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದರು. ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಿ, ನಮ್ಮ ಬದುಕನ್ನು ಹಸನುಗೊಳಿಸಲು ಕನಕದಾಸರು ಸಂದೇಶ ಮತ್ತು ಕೀರ್ತನೆಗಳನ್ನು ಪಾಲಿಸಬೇಕು ಎಂದು ಹೇಳಿದರು.

ಕನಕದಾಸರು ಕೆಳಸ್ಥರದಿಂದ ಬಂದ ವ್ಯಕ್ತಿಯಾದರೂ ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹಾನ್ ಸಂತ. ಕುಲ ಕುಲವೆಂದು ಹೊಡೆದಾಡದಿರಿ ಎಂದು ಕೀರ್ತನೆಯ ಮೂಲಕ ಸಮಾನತೆಯ ತತ್ವ ಸಾರಿದ ಶ್ರೇಷ್ಠ ದಾರ್ಶನಿಕರು.  ಕೀರ್ತನೆಗಳ ಮೂಲಕ ಇಡೀ ಸಮಾಜದಲ್ಲಿರುವವರು ಎಲ್ಲರೂ ಒಂದೇ ಎಂಬ ತತ್ವವನ್ನು ಸಾರಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿಶಿ ಮುದ್ದುರಾಜ್, ಕಾನೂನು ಘಟಕದ ಅಧ್ಯಕ್ಷ ರವಿಚಂದ್ರ ಗೌಡ, ಶೈಲೇಂದ್ರ, ವೇಣುಗೋಪಾಲ್, ಬಸಪ್ಪ, ಲೋಕೇಶ್, ಕೃಷ್ಣಪ್ಪ, ಅನಂತರಾಜು, ರಿಜ್ವಾನ್, ರಾಮು ಮತ್ತಿತರರು ಭಾಗವಹಿಸಿದ್ದರು.

Leave a Reply

comments

Related Articles

error: