ಕರ್ನಾಟಕಪ್ರಮುಖ ಸುದ್ದಿ

ಮಂಗಳೂರು-ಬೆಂಗಳೂರು ರೈಲುಗಳ ಸಂಖ್ಯೆ ಹೆಚ್ಚಳಕ್ಕೆ ದೇವೇಗೌಡರಿಂದ ಮನವಿ

ನವದೆಹಲಿ (ಡಿ.29): ಬೆಂಗಳೂರು-ಹಾಸನ-ಮಂಗಳೂರು ನಡುವೆ ರೈಲುಗಳ ಸಂಚಾರ ಸೇವೆಗಳನ್ನು ಹೆಚ್ಚಿಸಬೇಕೆಂದು ಮಾಜಿ ಪ್ರಧಾನಿ ಮತ್ತು ಲೋಕಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಗುರುವಾರ ತಮ್ಮ ನಿವಾಸಕ್ಕೆ ಆಗಮಿಸಿದ್ದ ಸಂದರ್ಭ ರೈಲ್ವೆ ಸಚಿವ ಪಿಯೂಷ್ ಗೋಯೆಲ್‍ ಅವರಿಗೆ ದೇವೇಗೌಡರು ಮನವಿ ಪತ್ರ ಸಲ್ಲಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಬೆಂಗಳೂರು-ಹಾಸನ ನಡುವೆ (ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ) ಹೊಸ ಬ್ರಾಡ್‍ಗೇಜ್ ಮಾರ್ಗ ಉದ್ಘಾಟನೆಯಾಗಿದೆ. ಕೃಷಿ ಆಧಾರಿತ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಜನರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ದೇವೇಗೌಡರು ಸಚಿವರಿಗೆ ತಿಳಿಸಿದರು.

ಪ್ರಸ್ತುತ ಈ ಹೊಸ ಮಾರ್ಗದಲ್ಲಿ ಮೂರು ಎಕ್ಸ್’ಪ್ರೆಸ್ ಮತ್ತು ಒಂದು ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿವೆ. ಇದು ಬಾಲಗಂಗಾಧರ ನಾಥ ನಗರ, ಶ್ರವಣಬೆಳಗೊಳ ಮತ್ತು ಅದರ ಆಚೆ ಇರುವ ಪವಿತ್ರ ಸ್ಥಳಗಳು ಮತ್ತು ಯಾತ್ರಾ ತಾಣಗಳಿಗೆ ಹೋಗುವ ಜನರಿಗೆ ಅನುಕೂಲವಾಗುತ್ತದೆ ಆದ ಕಾರಣ ಈ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆಗ್ರಹಿಸಿದರು.

ಈ ಮಾರ್ಗದಲ್ಲಿ ಮತ್ತಷ್ಟು ರೈಲುಗಳ ಸಂಚಾರವನ್ನು ಆರಂಭಿಸಿದರೆ ಈ ಭಾಗಗಳ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ರೈಲ್ವೆ ಸಚಿವರು ಇದನ್ನು ಪರಿಗಣಿಸಿ ಬೆಂಗಳೂರು- ಹಾಸನ ಹೊಸ ಮಾರ್ಗದ ನಡುವೆ ಹೆಚ್ಚಿನ ರೈಲು ಸಂಚಾರವನ್ನು ಆರಂಭಿಸಬೇಕು. ಚೆನ್ನೈ ಮತ್ತು ಮಂಗಳೂರು ನಡುವೆ (ಹಾಸನ ಮತ್ತು ಬೆಂಗಳೂರು ಮಾರ್ಗವಾಗಿ) ಎಕ್ಸ್‍ಪ್ರೆಸ್/ಸೂಪರ್ ಫಾಸ್ಟ್ ರೈಲುಗಳನ್ನು ಆರಂಭಿಸಬೇಕು ಇದರಿಂದ ಬಂದರು ನಗರಿಗಳ ನಡುವೆ ಅಂತರವೂ ಕಡಿಮೆಯಾಗುತ್ತದೆ ಹಾಗೂ ಸಂಪರ್ಕ ವೃದ್ಧಿಯಾಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಲಹೆ ನೀಡಿದರು.

ಅದೇರೀತಿ ಬೆಂಗಳೂರು ಮತ್ತು ಕಾರವಾರ ನಡುವೆ (ಕುಣಿಗಲ್ ಮತ್ತು ಹಾಸನ ಮಾರ್ಗವಾಗಿ) ಪ್ರತ್ಯೇಕ ರೈಲು ಹಾಗೂ ಹಾಸನ ಮತ್ತು ಕುಣಿಗಲ್ ಮಾರ್ಗವಾಗಿ ಮೈಸೂರು ಮತ್ತು ಬೆಂಗಳೂರು ನಡುವೆ ರೈಲು ಸೇವೆಗಳನ್ನು ಹೆಚ್ಚಿಸಬೇಕು ಎಂದು ಅವರು ತಿಳಿಸಿದರು.

ಮುಂದಿನ ವರ್ಷ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭೀಷೇಕಕ್ಕಾಗಿ ಭಕ್ತರು ಮತ್ತು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು-ಹಾಸನ ಮತ್ತು ಹಾಸನ -ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ ಕಲ್ಪಿಸಬೇಕು. ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪ್ರತಿದಿನ ಪ್ರತಿ ಗಂಟೆಗೊಮ್ಮೆ ಈ ರೈಲುಗಳು ಸಂಚರಿಸುವಂತಾಗಬೇಕೆಂದು ಹೆಚ್.ಡಿ. ದೇವೇಗೌಡರು ಸಲಹೆ ಮಾಡಿದ್ದಾರೆ.

(ಎನ್‍ಬಿ)

Leave a Reply

comments

Related Articles

error: