ಮೈಸೂರು

‘ಭಾವ ಕುಲುಮೆ’ ಕವನ ಸಂಕಲನ ಬಿಡುಗಡೆ

ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಗುರುವಾರ ಅಂತರಸಂತೆ ಪ್ರಕಾಶನ ಉದ್ಘಾಟನೆ, ‘ಭಾವ ಕುಲುಮೆ’ ಕವನ ಸಂಕಲನ ಲೋಕಾರ್ಪಣೆ, ಕನ್ನಡಿಗರ ಸಹಕಾರ ಜ್ಯೋತಿ ಪತ್ರಿಕೆ ಬಿಡುಗಡೆ, ರಾಜ್ಯೋತ್ಸವ ಪುರಸ್ಕೃತ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರು ಕೆ.ಎಂ.ನಾಗರಾಜು ಅವರ ‘ಭಾವಕುಲುಮೆ’ ಲೋಕಾರ್ಪಣೆಗೊಳಿಸಿದರು. ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್ ‘ಸಹಕಾರ ಜ್ಯೋತಿ’ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ, “ದಾಸ ಪರಂಪರೆಗೆ ಸೇರಿದ ಕನಕದಾಸರು ಮೇಲು- ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿದವರು. ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರು ‘ಹರಿಜನ’ ಮತ್ತು ‘ಮೂಕನಾಯಕ’ ಎಂಬ ಪತ್ರಿಕೆಗಳನ್ನು ಪ್ರಕಟಿಸಿ ದೇಶಾದ್ಯಂತ ಜನರಲ್ಲಿ ಹೊಸ ಸಂಚಲನವನ್ನು ಮೂಡಿಸಿದರು. ಪುಸ್ತಕಗಳು ಅಷ್ಟೇ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜನರ ಅಮೂಲ್ಯ ಆಸ್ತಿ ಪುಸ್ತಕಗಳು. ಈ ಆಸ್ತಿಯ ಮೂಲಕ ಜನರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ಸರಳ ಆರ್ಥಿಕ ನೀತಿಗಳ ಮೂಲಕ ಸ್ವಾವಲಂಬಿ ಮತ್ತು ಸಹಕಾರಿ ಜೀವನ ನಡೆಸಬೇಕೆಂದು ಗಾಂಧೀಜಿ ಮತ್ತು ಅಂಬೇಡ್ಕರ್ ಹೇಳಿದ್ದಾರೆ. ಸಹಕಾರ ಸಂಘಗಳು ಸಮಾಜವನ್ನು ಬದಲಾಯಿಸುವಲ್ಲಿ ಪ್ರಮುಖವಾಗಿವೆ. ಸಮಾನ ಸಮಾಜವನ್ನು ನಿರ್ಮಾಣ ಮಾಡುವ ಮೂಲಕ ಅಸಮಾನತೆಯನ್ನು ತೊಡೆದುಹಾಕುತ್ತವೆ.

ಕನಕದಾಸರು ಕುಲಕುಲವೆಂದು ಹೊಡೆದಾಡದಿರಿ ಎಂದು ಹೇಳುವ ಮೂಲಕ ಬದುಕಿನ ಸತ್ಯ ಸಂಗತಿಗಳನ್ನು ಸಮಾಜಕ್ಕೆ ತೋರಿಸಿದ್ದಾರೆ. ಎಲ್ಲರೂ ಸಹ ಜ್ಞಾನವಂತರಾಗಬೇಕು. ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು” ಎಂದು ತಿಳಿಸಿದರು.

ಅಂತರಸಂತೆ ಪ್ರಕಾಶನವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಹಕಾರ ಸಚಿವ ಜಿ.ಟಿ.ದೇವೇಗೌಡ ಅವರು, ಗಾಂಧೀಜಿ ಸಮಾನತೆ, ನ್ಯಾಯ ಎಲ್ಲವೂ ಸಹಕಾರ ಕ್ಷೇತ್ರದಿಂದ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಜನರು ಸಹಕಾರ ಸಂಘಗಳನ್ನು ನಂಬಿ 53 ಸಾವಿರ ಕೋಟಿ ರು. ಡೆಪಾಸಿಟ್ ಮಾಡಿದ್ದಾರೆ. ಪ್ರೀತಿ, ನಂಬಿಕೆ, ವಿಶ್ವಾಸ ಇವುಗಳೆಲ್ಲವನ್ನೂ ಸಹಕಾರ ಕ್ಷೇತ್ರದಲ್ಲಿ ಕಾಣಬಹುದಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಎಲ್ಲರಿಗೂ ಸಮಾನ, ಮುಕ್ತ ಅವಕಾಶವಿರುತ್ತದೆ. ಜಾತಿ- ಬೇಧವಿಲ್ಲದ ಕ್ಷೇತ್ರವಾಗಿದೆ. ಆದರೆ ಇಂದು ಪ್ರಬಲರೇ ಮೇಲುಗೈ ಸಾಧಿಸುತ್ತಿದ್ದು, ಹಿಂದುಳಿದವರು, ದುರ್ಬಲರು, ಅಲ್ಪಸಂಖ್ಯಾತರು  ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದ ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಒಟ್ಟು 2 ರಿಂದ 3 ಕೋಟಿ ಸದಸ್ಯರು ಈ ಸಹಕಾರಿ ಕ್ಷೇತ್ರದಲ್ಲಿ ಇದ್ದಾರೆ. ಆದರೆ, ಸಾಲ ಪಡೆಯುತ್ತಿರುವವರು ಮಾತ್ರ ಶೇ.10ರಿಂದ 20 ರಷ್ಟು ಮಾತ್ರ. ಇದಕ್ಕೆ ಕಾರಣ ನಬಾರ್ಡ್ ಮತ್ತು ಕೇಂದ್ರ ಸರ್ಕಾರದ ನಿಬಂಧನೆಗಳು, ಸಾಲ ಮರುಪಾವತಿ ವ್ಯವಸ್ಥೆ ಇಲ್ಲವಾಗಿರುವುದು. ಸರ್ಕಾರವು ಸಹಕಾರ ಕ್ಷೇತ್ರಕ್ಕೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಅಧಿಕಾರ ಕೇಂದ್ರೀಕರಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಸಹಕಾರಿ ಕ್ಷೇತ್ರ ಇಂದು ಕಲುಷಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜನರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು.

ನಂತರ ಆಂದೋಲನ ದಿಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡಿ ಗೌರವಿಸಿದರು. ಕೃತಿ ಕುರಿತು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಅರಗು ಮತ್ತು ಬ‍ಣ್ಣದ ಕಾರ್ಖಾನೆ ಮಾಜಿ ಅಧ‍್ಯಕ್ಷ ಅನಂತ, ಮೈಸೂರು ಜಿಲ್ಲಾ ವಿಶ್ವಕರ್ಮ ಸಮಾಜಗಳ ಮಹಾ ಒಕ್ಕೂಟದ ಅಧ್ಯಕ್ಷ ಸಿ.ಹುಚ್ಚಪ್ಪಚಾರ್, ಕಾಡಾದ ಮಾಜಿ ಅಧ್ಯಕ್ಷ ದಾಸೇಗೌಡ, ಹಿರಿಯ ಪತ್ರಕರ್ತ ಮುರುಡೇಶ್ವರ ಮೂರ್ತಿ ಇನ್ನಿತರ ಗಣ್ಯರು ಭಾಗವಹಿಸಿದ್ದರು.

 

Leave a Reply

comments

Related Articles

error: