ಲೈಫ್ & ಸ್ಟೈಲ್

ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಯುತ ಸಲಹೆ ಇಲ್ಲಿದೆ

ಚಳಿಗಾಲವೆಂದರೆ ಅದು ಹಬ್ಬಗಳು, ತಮಾಷೆ ಹಾಗೂ ವಿನೋದದಲ್ಲಿಯೇ ಕಳೆದುಹೋಗುವ ಸಮಯ. ಆದರೆ, ಚಳಿಗಾಲದ ಬರುವಿಕೆಯೊಂದಿಗೆ, ಜನರು ಅಲರ್ಜಿ, ಸಾಮಾನ್ಯ ಶೀತ, ಋತುವಿನ ಜ್ವರ ಮತ್ತು ತೀವ್ರ ಸ್ವರೂಪ ಪಡೆದುಕೊಳ್ಳುವ ಅಸ್ತಮಾ ಹಾಗೂ ಕೀಲುಬೇನೆಗೆ ತುತ್ತಾಗುತ್ತಾರೆ. ಇವುಗಳಲ್ಲಿ ಹೆಚ್ಚಿನ ವೈರಾಣು ಉಸಿರಾಟದ ಸೋಂಕುಗಳು ಸಣ್ಣ ಪ್ರಮಾಣದವು ಮತ್ತು ತನ್ನಷ್ಟಕ್ಕೆ ಗುಣವಾಗುವಂತವುಗಳಾಗಿದ್ದರೆ, ಇನ್ ಫ್ಲುಯೆಂಜಾ ವೈರಸ್ ನಿಂದ ಉಂಟಾಗುವ ಸೋಂಕು ಗಂಭೀರವಾಗಬಹುದು, ಕೆಲವೊಮ್ಮೆ ಆಸ್ಪತ್ರೆಗೂ ಸೇರಬೇಕಾಗಬಹುದು.

ಕೊಲಂಬಿಯಾ ಏಷಿಯಾ ಆಸ್ಪತ್ರೆಯ (ಮೈಸೂರು) ತಜ್ಞ ವೈದ್ಯೆ ಡಾ.ಸರಿತಾ ಪವಿತ್ರನ್ ಚಳಿಗಾಲದಲ್ಲಿ ಕಾಡುವ ಕೆಲವೊಂದು ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯ ಶೀತ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ. ಸಣ್ಣ, ಸ್ವಯಂ-ನಿಯಂತ್ರಣವಿರುವ ಆರೋಗ್ಯ ಸಮಸ್ಯೆ. ನೆಗಡಿ, ಕಟ್ಟುವುದು, ಒಣ ಮತ್ತು ಗಂಟಲು ತುರಿಕೆ, ಕೆಮ್ಮು, ಕಫ, ದೇಹಾಲಸ್ಯ ಮತ್ತು ಸಣ್ಣ ಪ್ರಮಾಣದ ಜ್ವರ ಇದರ ಲಕ್ಷಣ.

ಋತುವಿನ ಜ್ವರ ಅಥವಾ ಇನ್ ಫ್ಲುಯೆಂಜಾದಿಂದ ಹೆಚ್ಚಿನ ಜ್ವರ, ತಲೆನೋವು, ಮೈ-ಕೈ ನೋವು, ದೇಹಾಲಸ್ಯ, ಒಣಕೆಮ್ಮು, ಗಂಟಲು ನೋವು, ಮತ್ತು ನೆಗಡಿ ಬರುತ್ತದೆ,

ಶ್ವಾಸಕೋಶದ ಮೇಲ್ಭಾಗದ ವೈರಾಣು ಸೋಂಕು ಇಳಿವಯಸ್ಸಿನವರಲ್ಲಿ ಅಸ್ತಮಾ ಸಮಸ್ಯೆಯನ್ನು ದ್ವಿಗುಣಗೊಳಿಸಬಹುದು. ಹೆಚ್ಚಿನ ವೈರಸ್ ಗಳು ಕೆಮ್ಮುವಿಕೆ, ಸೀನುವಿಕೆ ಮೊದಲಾದವುಗಳ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಸೋಂಕಿನಿಂದ ಬಾಧಿತವಾದ ಉಸಿರಾಟದ ಅಂಗಗಳ ಸ್ರವಿಸುವಿಕೆಯನ್ನು ಕೈಯಿಂದ ಸಂಪರ್ಕಿಸುವುದರಿಂದ ಹರಡುತ್ತವೆ.

ಋತುಮಾನದ ಸೋಂಕುಗಳು ಸೀನುವಿಕೆ, ಒಣಕೆಮ್ಮು, ಮೂಗು, ಕಣ್ಣಿನ ಕೆರೆತ, ಮತ್ತು ಮೂಗು ಕಟ್ಟುವಿಕೆಯ ಮೂಲಕ ಕಾಣಿಸಿಕೊಳ್ಳುತ್ತವೆ.

ತಡೆಗಟ್ಟುವಿಕೆ ಮತ್ತು ಚಿಕಿತ್ಸೆ/ ಆರೈಕೆ ಮಾಡಬೇಕಾಗಿರುವುದಿಷ್ಟೇ

  • ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವ ಮೂಲಕ ನಿಮ್ಮ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಿ.
  • ಧೂಳಿನಿಂದ ರಕ್ಷಿಸಿಕೊಳ್ಳಲು ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ.
  • ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಿ.
  • ರೋಗನಿರೋಧಕ ಶಕ್ತಿಯನ್ನು ಶಕ್ತಿಯುತಗೊಳಿಸಲು ತಾಜಾ ಹಣ್ಣುಗಳು ಮತ್ತು ತರಕಾರಿಗಳೊಂದಿಗಿನ ಆರೋಗ್ಯಕರ ಪಥ್ಯವನ್ನು ಪಾಲಿಸಿ.
  • ಚಳಿಗಾಲದಲ್ಲಿ ಸಂಧಿವಾತ ತಡೆಗಟ್ಟಲು ದೇಹ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು, ಸಾಕಷ್ಟು ನೀರಿನ ಸೇವನೆ ಮತ್ತು ನಿಯಮಿತವಾದ ವ್ಯಾಯಾಮ ಮಾಡಬೇಕು.
  • ಇಳಿವಯಸ್ಸಿವನವರಿಗೆ, ಮಕ್ಕಳಿಗೆ ಮತ್ತು ಸಕ್ಕರೆ ಕಾಯಿಲೆ, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಯಂತಹ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನ್ಯುಮೋಕೋಕಲ್ ಮತ್ತು ಇನ್ ಫ್ಲುಯೆಂಜಾ ಚುಚ್ಚುಮದ್ದನ್ನು ಸೂಚಿಸಲಾಗುತ್ತದೆ.

ಏನು ಮಾಡಬಾರದು ..?

  • ರೋಗನಿರೋಧಕಗಳ ಮತ್ತು ಸ್ವಯಂ-ಔಷಧಿಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.
  • ವೈದ್ಯರ ಸಲಹೆಯಿಲ್ಲದೆ ಯಾವುದೇ ತರಹದ ಔಷಧಿಗಳನ್ನು ಸೇವಿಸಬಾರದು.
  • ಆರೋಗ್ಯ ಹದಗೆಟ್ಟಿರುವಾಗ ಕಿಕ್ಕಿರಿದ ಜಾಗಗಳಿಗೆ ಹೋಗುವುದರಿಂದ ದೂರವಿರಬೇಕು.

ಇವಿಷ್ಟನ್ನು ಪಾಲಿಸಿದಲ್ಲಿ ಚಳಿಗಾಲದಲ್ಲಿ ಬರುವ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು.

(ಎಸ್.ಎಚ್)

Leave a Reply

comments

Related Articles

error: