ಪ್ರಮುಖ ಸುದ್ದಿಮೈಸೂರು

ಚಾಮಯ್ಯ ಮೇಸ್ಟ್ರು ಮಗ ಶಂಕರ್ ಅಶ್ವತ್ಥ ಅವರ ಮನೆಗೆ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಭೇಟಿ

ಮೈಸೂರು,ಡಿ.31:- ಚಾಮಯ್ಯ ಮೇಸ್ಟ್ರು ಮಗ ಶಂಕರ್ ಅಶ್ವತ್ಥ ಉಬರ್ ಕ್ಯಾಬ್ ಚಾಲನೆ ಮಾಡಿ ಸ್ವಾಭಿಮಾನಿ ಜೀವನ ಸಾಗಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಕಳೆದ ಸೀಸನ್ ನ  ಒಳ್ಳೆಯ ಹುಡುಗ ಖ್ಯಾತಿಯ ಪ್ರಥಮ್ ಶಂಕರ್‌ ಅಶ್ವಥ್ ಮನೆಗೆ ಭೇಟಿ ನೀಡಿದರು.

ಪ್ರಥಮ್ ತನ್ನ ಮುಂದಿನ ಚಿತ್ರಕ್ಕಾಗಿ ಶಂಕರ್ ಅಶ್ವತ್ಥ ಅವರಿಗೆ  ಪಾತ್ರ  ಕಾಯ್ದಿರಿಸಿದ್ದಾರೆ. ಪ್ರಥಮ್ ಅಭಿನಯಿಸಿ ನಿರ್ದೇಶಿಸಲಿರುವ ಪ್ರಥಮ್ ಬಿಲ್ಡ್ ಅಪ್   ಚಿತ್ರಕ್ಕೆ ಶಂಕರ್ ಅಶ್ವತ್ಥ ಅವರನ್ನು  ಪೋಷಕ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಶಂಕರ್‌ ಅಶ್ವತ್ಥ ಅವರ ಯೋಗ ಕ್ಷೇಮ ವಿಚಾರಿಸಿ ಖಾಲಿ ಚೆಕ್ ವಿತರಿಸಿದರು. ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ಪ್ರಥಮ್ ನಾನು ಶಂಕರ್ ಅಶ್ವಥ್ ಗೆ ಸಹಾಯ ಮಾಡಲು ಬಂದಿಲ್ಲ. ಅವರ ಸ್ವಾಭಿಮಾನದ ಬದುಕನ್ನು ಗೌರವಿಸುತ್ತೇನೆ. ನನ್ನ ಮುಂದಿನ ಚಿತ್ರದಲ್ಲಿ ಅವರಿಗೆ ಸೂಕ್ತವಾದ ಪಾತ್ರವಿದೆ.  ಅದಕ್ಕಾಗಿ ಅವರ ಡೇಟ್ಸ್ ಕೇಳಲು ಬಂದಿದ್ದೇನೆ. ನನ್ನ ಚಿತ್ರದಲ್ಲಿ ಅಭಿನಯಿಸಲು ಶಂಕರ್ ಅಶ್ವತ್ಥ  ಒಪ್ಪಿದ್ದಾರೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ. ಹಿರಿಯ ನಟರು ನಮಗೆ ಬಹಳ ಮುಖ್ಯ ಅವರು ಸದಾ ನಮ್ಮ ಜೊತೆ ಇರಬೇಕು. ಅವರ  ತಂದೆ ಕೆ.ಎಸ್ ಅಶ್ವಥ್ ರ ಜೊತೆ ನಟಿಸಲಾಗಲಿಲ್ಲ. ಹೀಗಾಗಿ ಶಂಕರ್ ಅಶ್ವತ್ಥ ರ ಜೊತೆ ನಟಿಸುತ್ತಿರುವುದು ನನಗೆ ಖುಷಿಯಾಗಿದೆ ಎಂದಿದ್ದಾರೆ. ಶಂಕರ್ ಬದುಕು ಹಸನಾಗಲಿ ಎಂಬುದೇ ಅವರ ಅಭಿಮಾನಿಗಳ ಆಶಯ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: