ದೇಶಮೈಸೂರು

ಕರಿಯರ್‍ ಪ್ರೈಮ್‍ನ ಡಾ. ಅರಸು ಅವರಿಗೆ 2016ನೇ ಸಾಲಿನ ‘ಯುವ ಉದ್ಯಮಿ’ ಗೌರವ

ನ್ಯಾಷನಲ್ ಫೌಂಡೇಷನ್ ಫಾರ್ ಎಂಟರ್‍‍ಪ್ರೈನರ್‍ಶಿಪ್‍ ಡೆವಲಪ್‍ಮೆಂಟ್‍ (ಎನ್‍ಎಫ್‍ಇಡಿ) ವತಿಯಿಂದ ಕೊಡುವ ‘ಯುವ ಉದ್ಯಮಿ'(ಯಂಗ್‍ ಎಂಟರ್‍ ಪ್ರೈನರ್‍) ಗೌರವಕ್ಕೆ “ಕರಿಯರ್ ಪ್ರೈಮ್” ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ|| ಅರಸು ಎಂ.ಟಿ. ಅವರು ಪಾತ್ರರಾಗಿದ್ದಾರೆ. ಕೊಯಮತ್ತೂರಿನಲ್ಲಿ ನಡೆದ 3ನೇ ವರ್ಷದ ‘ಉದ್ಯಮಿಗಳ ಸಮಾವೇಶ’ದಲ್ಲಿ 2016ನೇ ಸಾಲಿನ ಪ್ರಶಸ್ತಿಯನ್ನು ಡಾ. ಅರಸು ಅವರಿಗೆ ನೀಡಿ ಗೌರವಿಸಲಾಯಿತು.

ಇಂಜಿನಿಯರಿಂಗ್‍ ಕಾಲೇಜು ಮತ್ತು ಮ್ಯಾನೆಜ್‍ಮೆಂಟ್‍ ಕಾಲೇಜುಗಳ ವಿದ್ಯಾರ್ಥಿಗಳು ಕ್ಯಾಂಪಸ್‍ನಲ್ಲೇ ನೇಮಕಾತಿ ಪಡೆಯಲು ಕಾರ್ಪೊರೇಟ್‍ ಕಂಪನಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಆಯ್ಕೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಅರಸು ಅವರ “ಕರಿಯರ್ ಪ್ರೈಮ್” ಸಂಸ್ಥೆಯ ಪರಿಶ್ರಮ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

“ಕರಿಯರ್ ಪ್ರೈಮ್ ” ಕುರಿತು

ಸಂಸ್ಥೆಯನ್ನು 2010ನೇ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ಅರಸು ಅವರು ಸಾಧಾರಣ ಬಂಡವಾಳದೊಂದಿಗೆ ಪ್ರಾರಂಭಿಸಿದರು. ಇಂದು 55 ಇಂಜಿನಿಯರಿಂಗ್ ಮತ್ತು ಮ್ಯಾನೆಂಜ್‍ಮೆಂಟ್‍ ಕಾಲೇಜುಗಳ 50ಕ್ಕೂ ಹೆಚ್ಚು ಉದ್ಯಮಿಗಳು ಸಂಸ್ಥೆಯೊಂದಿಗೆ ಸಹಯೋಗ ಹೊಂದಿದ್ದಾರೆ. 120 ಕ್ಕೂ ಹೆಚ್ಚು ಕಂಪನಿಗಳು ಕರಿಯರ್‍ ಪ್ರೈಮ್‍ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಾರಣ, ಕರಿಯರ್ ಪ್ರೈಮ್ ಸಂಸ್ಥೆಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನೂ ಸಹ ಸಂಪರ್ಕಿಸಿ ಉದ್ಯೋಗದ ಅವಕಾಶವವನ್ನು ಮನೆ ಬಾಗಿಲಿಗೆ ತಲುಪಿಸುವಂತಹ ಉತ್ತಮ ಸೇವೆ ನೀಡುತ್ತಿದೆ. 2 ಮತ್ತು 3ನೇ ಹಂತದ ಕಾಲೇಜುಗಳನ್ನು ಉದ್ಯಮಗಳೊಂದಿಗೆ ಬೆಸೆಯುವಲ್ಲಿ ಸಂಸ್ಥೆಯ ಪಾತ್ರ ಗಣನೀಯ ಪ್ರಮಾಣದ್ದಾಗಿದೆ. ಈ ಎಲ್ಲ ಪರಿಶ್ರಮವನ್ನು ಗುರುತಿಸಿ ಡಾ. ಅರಸು ಅವರನ್ನು ‘ಯುವ ಉದ್ಯಮಿ’ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಯುವಕರು ಸ್ವಾವಲಂಬಿಗಳಾಗಬೇಕು: ಅರಸು

ಪ್ರಶಸ್ತಿಗೆ ಭಾಜನರಾದ ಎಂ.ಟಿ. ಅರಸು ಅವರು ಮಾತನಾಡಿ, ಯುವಜನತೆ ಅನ್ವೇಷಕ ಮನಸ್ಥಿತಿ ಹೊಂದುವ ಮೂಲಕ ನೂತನ ಉದ್ಯಮ ಸ್ಥಾಪಿಸುವತ್ತ ಪ್ರಯತ್ನಿಸಬೇಕು. ಇಂದು ಜಗತ್ತು ವೇಗವಾಗಿ ಬದಲಾಗುತ್ತಿದೆ. ಈ ದೃಷ್ಟಿಯಿಂದ ಹೊಸ ಹೊಸ ತಂತ್ರಜ್ಞಾನಗಳ ಕುರಿತು ಅರಿತುಕೊಳ್ಳುವಲ್ಲಿ ಸದಾ ಜಾಗೃತರಾಗಿರಬೇಕು. ಕರಿಯರ್‍ ಪ್ರೈಮ್ ಸಂಸ್ಥೆಯ ಸ್ಥಾಪನೆ ಮತ್ತು ಬೆಳವಣಿಗೆಯ ಹಿಂದೆಯೂ ಇದೇ ರೀತಿಯ ಮನಸ್ಥಿತಿ ಕೆಲಸ ಮಾಡಿತು. ಆಯ್ಕೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಒಂದು ಆಲೋಚನೆಯೇ ಇಂದು ಇಷ್ಟು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಹೀಗಾಗಿ ಯುವ ಜನತೆ ಅನ್ವೇಷಕ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಯುವಜನತೆ ಸಮಾಜಮುಖಿ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಜನರ ನಾಡಿಮಿಡಿತವನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಹೀಗಾದಾಗ ಮಾತ್ರ ನಾವು ನಮ್ಮ ಸಮಾಜವನ್ನು ಆ ಮೂಲಕ ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂದು ಯುವಜನತೆಗೆ ಕಿವಿಮಾತು ಹೇಳಿದರು.

Leave a Reply

comments

Related Articles

error: