ಪ್ರಮುಖ ಸುದ್ದಿಮೈಸೂರು

ಕನಕದಾಸರು ಸಮಾನ ಸಮಾಜಕ್ಕಾಗಿ ದುಡಿದ ಮಹಾನ್ ಸಂತ: ಡಾ.ಎಚ್.ಸಿ. ಮಹದೇವಪ್ಪ

ಕನಕದಾಸರು ಕೆಳಸ್ಥರದಿಂದ ಬಂದವರಾದರೂ ಅವರ ಚಿಂತನೆಗಳು, ಆಲೋಚನೆಗಳು ಮೇಲ್ಮಟ್ಟದಲ್ಲಿದ್ದವು. ಸಮಾಜದ ಸುಧಾರಣೆಗೆ, ಸಮಾನ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಷ್ಠ ದಾರ್ಶನಿಕ ಸಂತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅಭಿಪ್ರಾಯಪಟ್ಟರು.

ಗುರುವಾರ ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬುದ್ಧ, ಬಸವ, ಜೈನ, ದಾಸ ಪರಂಪರೆಯಲ್ಲಿ ಬಂದ ಸಮಾಜ ಸುಧಾರಕರು ಬಲಾಢ್ಯರಿಂದ ಬಲಹೀರನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಮಾನವೀಯ ಮೌಲ್ಯ ಬಿತ್ತಿದ್ದಾರೆ. ಟಿಪ್ಪು ಸುಲ್ತಾನ್ ರಾಷ್ಟ್ರೀಯ ನಾಯಕ, ವಿಜ್ಞಾನಿ ಅವರ ಜಯಂತಿಯನ್ನು ಕೆಲವರು ವಿರೋಧಿಸುತ್ತಾರೆ. ಅವರಿಗೆ ಟಿಪ್ಪು ಜಯಂತಿ ಅಲರ್ಜಿ ಎಂದ ಅವರು, ಸಮಾಜದ ಅಭ್ಯುದಯಕ್ಕಾಗಿ ದುಡಿದವರ ಜಯಂತಿ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಅವರ ಜೀವನ ಸಂದೇಶವನ್ನು ಪರಿಚಯಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಕನಕದಾಸರು ದಾಸ ಸಾಹಿತ್ಯದ ಮೂಲಕ ಸಾಹಿತ್ಯವನ್ನು ಇನ್ನಷ್ಟು ಸರಳಗೊಳಿಸಿದರು. ಇವರಿಂದಾಗಿ 16ನೇ ಶತಮಾನದ ದಾಸ ಸಾಹಿತ್ಯ ಹೆಚ್ಚು ಜನಮುಖಿಯಾದವು. ಜಾತಿ-ನೀತಿಯ ಉಡದ ಪಟ್ಟಿನ ನಡುವೆಯೂ ಕನಕದಾಸರು, ಜನತೆಯಲ್ಲಿ ಸಾಮಾಜಿಕ ಚಿಂತನೆ, ಕಾವ್ಯ ಮತ್ತು ಕೀರ್ತನೆಗಳ ಮೂಲಕ ಸಮಾಜದ ಬದಲಾವಣೆಗೆ ಮಹತ್ತರ ಕಾಣಿಕೆ ಸಲ್ಲಿಸಿದರು ಎಂದರು.

ಬಳಿಕ ಮಾತನಾಡಿದ ಶಾಸಕ ಎಂ.ಕೆ. ಸೋಮಶೇಖರ್, ಸಮಾಜ ಎಷ್ಟೇ ಪರಿವರ್ತನೆಯಾದರೂ ಸಮಾಜದಲ್ಲಿನ ಜನರ ಮನಸ್ಥಿತಿ ಬದಲಾಗಿಲ್ಲ. ಆಧುನಿಕ ಸಮಾಜದಲ್ಲಿಯೂ ಹೃದಯ ವೈಶಾಲ್ಯತೆ ಬೆಳೆದಿಲ್ಲ. ಜಾತೀಯತೆ, ತಾರತಮ್ಯ, ಅಸಮಾನತೆ, ಮೌಢ್ಯ ಇಂದಿಗೂ ತಾಂಡವಾಡುತ್ತಿದೆ. 16ನೇ ಶತಮಾನದಲ್ಲಿಯೇ ಕನಕದಾಸರು ಇವುಗಳ ವಿರುದ್ಧ ಹೋರಾಟ ಮಾಡಿ ಹೊಸ ಬೆಳಕನ್ನು ತೋರಿದ್ದರು ಎಂದು ಹೇಳಿದರು.

ಇದೇ ವೇಳೆ ಸಂತ ಕನಕದಾಸ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಶಾಸಕರಾದ ವಾಸು, ಜಿ.ಟಿ. ದೇವೇಗೌಡ, ಶಿವಾನಂದಪುರಿ ಸ್ವಾಮೀಜಿ, ಡಾ.ಯತೀಂದ್ರ, ಮೇಯರ್ ಬಿ.ಎಲ್. ಭೈರಪ್ಪ, ಜಿಲ್ಲಾಧಿಕಾರಿ ಡಿ. ರಂದೀಪ್, ಮೂಡಾ ಅಧ್ಯಕ್ಷ ಡಿ. ಧ್ರುವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎಚ್.ಎ. ವೆಂಕಟೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಚಂದ್ರಿಕಾ ಸುರೇಶ್, ತಾ.ಪಂ. ಉಪಾಧ್ಯಕ್ಷ ಎನ್.ಬಿ. ಮಂಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಣ್ಮನ ಸೆಳೆದ ಮೆರವಣಿಗೆ: ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬೆಳ್ಳಿ ರಥದಲ್ಲಿ ಕನಕ ಪ್ರತಿಮೆಯುಳ್ಳ ಮೆರವಣಿಗೆಗೆ ಸಚಿವ ಮಹದೇವಪ್ಪ ಚಾಲನೆ ನೀಡಿದರು.

ವಿವಿಧ ಜಾನಪದ ತಂಡ, ಕನಕರ ಬಗ್ಗೆ ಮಾಹಿತಿ ನೀಡುವ, ಸಂಗೊಳ್ಳಿ ರಾಯಣ್ಣನ ಶೌರ್ಯ ಸಾರುವ ಸ್ತಬ್ಧಚಿತ್ರ ಒಳಗೊಂಡ ಅದ್ಧೂರಿ ಮೆರವಣಿಗೆ ನಡೆಯಿತು. ಡೊಳ್ಳುಕುಣಿತ, ಕಂಸಾಳೆ, ಗೊರವರ ಕುಣಿತ, ಗೊಂಬೆ ಕುಣಿತ, ದೊಣ್ಣೆ ವರಸೆ ಮೊದಲಾದ ಕಲಾ, ಸಾಹಸ ಪ್ರಕಾರಗಳು ಜನರನ್ನು ಆಕರ್ಷಿಸಿದವು. ಜೊತೆಗೆ ಕುರುಬ ಸಮುದಾಯದ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು ಹಬ್ಬದ ವಾತಾವರಣ ಸೃಷ್ಟಿಸಿದರು. ಮೆರವಣಿಗೆ ದೇವಸ್ಥಾನದಿಂದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ದೇವರಾಜ ಅರಸ್ ರಸ್ತೆ, ಮೆಟ್ರೊಪೋಲ್ ವೃತ್ತ ಮೂಲಕ ಕಲಾಮಂದಿರ ತಲುಪಿತು. ಮಾರ್ಗದುದ್ದಕ್ಕೂ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಬಾಳೆ ಹಣ್ಣು, ನಂದಿನಿ ಮಜ್ಜಿಗೆ ಮೊದಲಾದವನ್ನು ಹಲವಾರು ದಾನಿಗಳು ವಿತರಿಸಿದರು.

kalamandira-2

Leave a Reply

comments

Related Articles

error: