ಮೈಸೂರು

ಐಎಸ್ಐ ಮಾರ್ಕ್ ಇಲ್ಲದ ಸುಮಾರು 300ಕ್ಕೂ ಹೆಚ್ಚು ಹೆಲ್ಮೆಟ್ ವಶಪಡಿಸಿಕೊಂಡ ಪೊಲೀಸರು : ಪೊಲೀಸರಿಂದ ವಾಹನ ಸವಾರರಲ್ಲಿ ಜಾಗೃತಿ

ಮೈಸೂರು,ಜ.2-ವಾಹನ ಸವಾರರ ಸುರಕ್ಷತೆಗಾಗಿ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು. ಅದರಂತೆ ವಾಹನ ಸವಾರರು ಹೆಲ್ಮೇಟ್ ಖರೀದಿಸಿದ್ದರು. ಆದರೆ ಆ ಹೆಲ್ಮೆಟ್ ಗಳು ವಾಹನ ಸವಾರರಿಗೆ ಎಷ್ಟು ಸುರಕ್ಷಿತ ಎಂದು ನಗರದೆಲ್ಲೆಡೆ ಬೆಳ್ಳಂಬೆಳಿಗ್ಗೆ ಸಂಚಾರ ಪೊಲೀಸರು ಹೆಲ್ಮೆಟ್ ಪರಿಶೀಲನೆಗೆ ಮುಂದಾಗಿದ್ದಾರೆ.

ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಸಮಯದಲ್ಲೇ ವಾಹನ ಸವಾರರು ಆದಷ್ಟು ಫುಲ್ ಹೆಲ್ಮೆಟ್ ಧರಿಸಬೇಕು. ಫುಲ್ ಹೆಲ್ಮೆಟ್ ಅಥವಾ ಹಾಫ್ ಹೆಲ್ಮೆಟ್ ಯಾವುದೇ ಧರಿಸಿದರೂ ಅದು ಐಎಸ್ಐ ಮಾರ್ಕ್ ನಿಂದ ಕೂಡಿರಬೇಕು ಎಂದು ತಿಳಿಸಲಾಗಿತ್ತು. ಈ ಬಗ್ಗೆ ನಗರ ಪೊಲೀಸರು, ಸಂಘ ಸಂಸ್ಥೆಗಳವರು ಸಾಕಷ್ಟು ಅರಿವು ಮೂಡಿಸಿದ್ದರು. ಆದರೂ ಅದೆಷ್ಟೊ ವಾಹನ ಸವಾರರು ಪೊಲೀಸರು ಹಾಕುವ ದಂಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿ ಸಂಚರಿಸುತ್ತಿದ್ದರು.

ವಾಹನ ಸವಾರರಿಂದ ಐಎಸ್ಐ ಮಾರ್ಕ್ ನಿಂದ ಕೂಡಿರದ ಹೆಲ್ಮೆಟ್ ಗಳನ್ನು ವಶಪಡಿಸಿಕೊಂಡು ಫುಟ್ ಬಾತ್ ನಲ್ಲಿ ಇಟ್ಟಿರುವುದು.

ಈ ಬಗ್ಗೆ ಎಚ್ಚೆತ್ತುಕೊಂಡ ಸಂಚಾರ ಪೊಲೀಸರು ಮಂಗಳವಾರ ಬೆಳಿಗೆಯಿಂದಲೇ ನಗರದೆಲ್ಲೆಡೆ ವಾಹನ ಸವಾರರ ಹೆಲ್ಮೆಟ್ ಪರಿಶೀಲನೆಗೆ ಮುಂದಾಗಿದ್ದರು. ಆಫ್ ಹೆಲ್ಮೆಟ್ ಧರಿಸಿದ್ದ ವಾಹನ ಸವಾರರನ್ನು ನಿಲ್ಲಿಸಿ ಪರಿಶೀಲನೆಗೆ ಒಳಪಡಿಸಿದ ಪೊಲೀಸರು ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ವಶಪಡಿಸಿಕೊಂಡರಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ಐಎಸ್ಐ ಮಾರ್ಕ್ ನ ಹೆಲ್ಮೆಟ್ ಗಳನ್ನು ಧರಿಸಿ ಎಂದು ತಿಳಿ ಹೇಳಿದರು.

ನಗರದ ಕುರುಬಾರಹಳ್ಳಿ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಕೆ.ಡಿ.ರೋಡ್ ಹೀಗೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಸೇರಿದಂತೆ ಹಲವೆಡೆ ಹೆಲ್ಮೆಟ್ ತಪಾಸಣೆ ನಡೆಸಿ ಐಎಸ್ಐ ಮಾರ್ಕ್ ಇಲ್ಲದ ಸುಮಾರು 300ಕ್ಕೂ ಹೆಚ್ಚು ಹೆಲ್ಮೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ಕುರುಬಾರಹಳ್ಳಿ ಸರ್ಕಲ್ ಬಳಿ ನಡೆಸಿದ ಹೆಲ್ಮೆಟ್ ತಪಾಸಣೆಯಲ್ಲಿ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಸ್ಪೆಕ್ಟರ್ ಎನ್.ಮುನಿಯಪ್ಪ, ಮುಖ್ಯ ಪೇದೆ ಎಚ್.ಪಿ.ಶ್ರೀಕಂಠಮೂರ್ತಿ, ಪಿಸಿಗಳಾದ ನಾಗರಾಜು, ಕುಮಾರಸ್ವಾಮಿ, ಮುನ್ಸಿರ್ ಅಹಮದ್ ಇದ್ದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: