ಮೈಸೂರು

ಸರ್ಕಾರಿ ಸೇವೆಗಳ ಸುಗಮಗೊಳಿಸುವ “ಸ್ಪಂದನಾ ಕೇಂದ್ರ” ಉದ್ಘಾಟನೆ

ಸಾರ್ವಜನಿಕರಿಗೆ ಕಂದಾಯ ಮತ್ತು ಇತರೆ ಇಲಾಖೆಯ ವಿವಿಧ ಸೇವೆಗಳು ಸುಲಭವಾಗಿ ಒಂದೇ ಸ್ಥಳದಲ್ಲಿ ದೊರೆಯುವ ಹಾಗೂ ತಾಲೂಕು ಕಚೇರಿಗಳಲ್ಲಿನ ಜನಸಂದಣಿಯನ್ನು ನಿವಾರಿಸುವ ನಿಟ್ಟಿನಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ನಿರ್ಮಿಸಿರುವ ಏಕಗವಾಕ್ಷಿ ವ್ಯವಸ್ಥೆಯುಳ್ಳ ‘ಸ್ಪಂದನಾ’ ಕೇಂದ್ರವನ್ನು ಗುರುವಾರದಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಉದ್ಘಾಟಿಸಿದರು. ಬಳಿಕ ಜನರಿಂದ ಖುದ್ದು ಅರ್ಜಿಗಳನ್ನು ಸ್ವೀಕರಿಸಿದರು.

ಬಳಿಕ ಮಾತನಾಡಿ, ರಾಜ್ಯ ಸರಕಾರವು 2016-17ನೇ ಸಾಲಿನ ಆಯವ್ಯದಲ್ಲಿ ಪ್ರತಿ ಜಿಲ್ಲೆಗಳಲ್ಲಿ ‘ಸ್ಪಂದನಾ’ ಕೇಂದ್ರ ತೆರೆಯುವುದಾಗಿ ಘೋಷಿಸಿತ್ತು. ಮೊದಲ ಹಂತದಲ್ಲಿ ಮೈಸೂರು, ಗದಗ, ಬೆಳಗಾವಿ, ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

“ಸ್ಪಂದನಾ” ಕೇಂದ್ರದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಮಿ ಯೋಜನೆ ಸೇವೆಗಳಾದ ಆರ್‍ಟಿಸಿ, ಹಕ್ಕು ಬದಲಾವಣೆ, ಖಾತಾ, ಭೂಮಿ ಆನ್‍ಲೈನ್ ಕಿಯಾಸ್ಕ್ ಸೇವೆ, ಸರ್ವೆ ಇಲಾಖೆಯ ಮೋಜಣಿ ಯೋಜನೆಯ ಸೇವೆಗಳಾದ 11ಇ-ಕ್ರಯ ವಿಭಾಗ, ತತ್ಕಾಲ್ ಅರ್ಜಿ, ಹದ್ದುಬಸ್ತು, ಇ-ಸ್ವತ್ತು, ಹಿಂದುಳಿದ ವರ್ಗಗಳ ಪ್ರಮಾಣ ಪತ್ರ, ವಾಸಸ್ಥಳ, ಗೇಣಿ ರಹಿತ, ವ್ಯವಸಾಯಗಾರರ ಕುಟುಂಬದ ಸದಸ್ಯತ್ವ ದೃಢೀಕರಣ ಪತ್ರ, ಭೂ ಹಿಡುವಳಿ ಪತ್ರ, ನಿರುದ್ಯೋಗಿ ದೃಢೀಕರಣ ಪತ್ರ, ಬೆಳೆ ದೃಢೀಕರಣ ಪತ್ರ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಸೇರಿ ಇತರ ದೃಢೀಕರಣ ಪತ್ರಗಳು ಕಾಲಮಿತಿಯೊಳಗೆ ನಿಯಮಾನುಸಾರ ದೊರೆಯಲಿವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಿ. ರಂದೀಪ್, ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಮೈಸೂರು ತಹಸೀಲ್ದಾರ್ ರಮೇಶ್ ಬಾಬು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ಕಚೇರಿ ಸಿಬ್ಬಂದಿ ಹಾಜರಿದ್ದರು.

Leave a Reply

comments

Related Articles

error: