ಕರ್ನಾಟಕ

ಡಿಸಿ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಲು ಹೈ ಕೋರ್ಟ್ ಆದೇಶ

ಚಾಮರಾಜನಗರ,ಜ.3-ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕಟ್ಟಡಗಳನ್ನು ಹೊಡೆದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬುಧವಾರ (ಇಂದು) ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿ ಬಿ.ರಾಮು ಅವರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಡೀವಿಯೇಷನ್ ರಸ್ತೆಯಲ್ಲಿ ಅಂಗಡಿ ಹೊಂದಿದ್ದ ಮಹಮದ್ ಹಬೀಬುಲ್ಲಾ, ಇನಾಯತ್ ಉಲ್ಲಾ, ವಸೀಂ ಉಲ್ಲಾ, ಸೈಮನ್ ಡಿಸಿಲ್ವ ಸೇರಿದಂತೆ 24 ಮಂದಿ ಹೈಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಷ್ಟ್ರೀಯ ಹೆದ್ದಾರಿ  ಎಇಇ, ಭೂಸ್ವಾಧೀನಾಕಾರಿ, ನಗರಸಭೆ ಆಯುಕ್ತರು ಎದುರುದಾರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಡೀವಿಯೇಷನ್ ರಸ್ತೆ ಅಗಲೀಕರಣಕ್ಕಾಗಿ ಕಟ್ಟಡ ಒಡೆಯಲಾಗುತ್ತಿದೆ. ಇದಕ್ಕೆ ತಡೆಯಾಜ್ಞೆ ನೀಡಬೇಕೆಂದು ಈ ಮುಂಚೆ 2016ರಲ್ಲಿ ಕಟ್ಟಡ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಹೈಕೋರ್ಟ್ 2.12.16ರಲ್ಲಿ ಒಂದು ಆದೇಶ ನೀಡಿತ್ತು. ಆ ಆದೇಶದಲ್ಲಿ ಆಸ್ತಿಗಳ ಪರಿಶೀಲನೆ ಮಾಡಿ ಒತ್ತುವರಿ ನಿಜವಾಗಿದ್ದರೆ ಅದಕ್ಕೆ 30 ದಿನ ಸಮಯ ನೀಡಿ. ಅನಂತರ ತೆರವುಗೊಳಿಸಿ ಸ್ವಂತ ಜಾಗವಾಗಿದ್ದರೆ ಕಾನೂನು ಪ್ರಕಾರ ಅವರಿಗೆ ನೀಡಬೇಕಾದ ಸೂಕ್ತ ಪರಿಹಾರ ನೀಡಬೇಕು. ಬಳಿಕ ಸ್ವಾಧೀನ ಪಡಿಸಿಕೊಂಡು ರಸ್ತೆ ಅಗಲೀಕರಣ ಮಾಡಬೇಕು ಎಂದು ಸೂಚಿಸಲಾಗಿತ್ತು.

ಆದರೆ  ಇಂದಿನ ಜಿಲ್ಲಾಧಿಕಾರಿ ರಾಮು ಅವರು ಈ ಆದೇಶವನ್ನು ನಿರ್ಲಕ್ಷಿಸಿ 9.10.17ರಲ್ಲಿ ಕಟ್ಟಡಗಳನ್ನು ಏಕಾಏಕಿ ಧ್ವಂಸಗೊಳಿಸಿದ್ದರು. ಇದರಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಕಟ್ಟಡಗಳ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು‌

ಹೈಕೋರ್ಟ್‍ನ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ್ ಮತ್ತು ಅರವಿಂದ ಕುಮಾರ್ ಅವರ ದ್ವಿಸದಸ್ಯ ಪೀಠದಲ್ಲಿ ಮಂಗಳವಾರ ವಿಚಾರಣೆ ಇತ್ತು. ಪ್ರತಿವಾದಿ ಜಿಲ್ಲಾಧಿಕಾರಿ ರಾಮು ಅವರು ವಿಚಾರಣೆಗೆ ಗೈರು ಹಾಜರಾಗಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿಗಳು ಪ್ರತಿವಾದಿ ಸರ್ಕಾರಿ ವಕೀಲರಿಗೆ ಬಿ.ರಾಮು ಅವರು ನ್ಯಾಯಾಲಯಕ್ಕೆ ಹಾಜರಾಗಲೇಬೇಕೆಂದು ತಿಳಿಸಿದ್ದಾರೆ. (ವರದಿ-ಆರ್.ವಿ.ಎಸ್, ಎಂ.ಎನ್)

Leave a Reply

comments

Related Articles

error: