ಕರ್ನಾಟಕಪ್ರಮುಖ ಸುದ್ದಿಮೈಸೂರು

ಆತ್ಮಹತ್ಯೆಗೆ ಮುಂದಾಗಿದ್ದ ಇಂಜನಿಯರಿಂಗ್‌ ವಿದ್ಯಾರ್ಥಿಯ ಪ್ರಕರಣಕ್ಕೆ ಹೊಸ ತಿರುವು : ಉಗ್ರರು ನನ್ನನ್ನು ವಿಧ್ವಂಸಕ ಕೃತ್ಯಕ್ಕೆ ಪ್ರಚೋದಿಸಿದ್ದರು

ಉಗ್ರರು ಕನ್ನಡದಲ್ಲಿ ಮಾತನಾಡುತ್ತಿದ್ದರು

ರಾಜ್ಯ(ಬಾಗಲಕೋಟ)ಜ.3:- ಮೈಸೂರು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವ ಉಗ್ರರು ತನ್ನನ್ನು ವಿಧ್ವಂಸಕ ಕೃತ್ಯಕ್ಕೆ ಪ್ರಚೋದಿಸಿದ್ದರು ಎಂದು ಹೇಳಿ ಆತ್ಮಹತ್ಯೆಗೆ ಮುಂದಾಗಿದ್ದ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು ಅವರು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅವರನ್ನು ಸಮಗ್ರ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾನೆ.

ಇಂಜನಿಯರಿಂಗ್ ವಿದ್ಯಾರ್ಥಿ ಶರಣಪ್ಪ ನಾಗರಾಳ ಬಿಚ್ಚಿಟ್ಟಿರುವ ವಿಷಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತಿದೆ. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ವಿಷ ಸೇವಿಸಿ ನಂತರ ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವ ಹುನಗುಂದ ತಾಲೂಕಿನ ಕೋಡಿಹಾಳ ಗ್ರಾಮದ ಶರಣಪ್ಪ ನಾಗರಾಳ ಮೈಸೂರಲ್ಲಿ ಇಂಜನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ. ಕಳೆದ ಒಂದೂವರೆ ವರ್ಷದ ಹಿಂದೆ ಆಕಸ್ಮಿಕವಾಗಿ ಇವರನ್ನು ಈ ಮೇಲ್ ಮೂಲಕ ಭೇಟಿಯಾದ ಮತ್ತು ಸಂಪರ್ಕಕ್ಕೆ ಸಿಕ್ಕ ಉಗ್ರರು ಎನ್ನಲಾದ ರಫೀಕ್ ಮತ್ತು ಇಸ್ಮಾಯಿಲ್ ಮೈಸೂರಿನಲ್ಲಿ  ಅಮಲು ಬರುವ ಇಂಜೆಕ್ಷನ್ ನೀಡಿ ಒಂದು ಗುಪ್ತ ಜಾಗಕ್ಕೆ ಕರೆದೊಯ್ದಿದ್ದರು ಎಂಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ನನ್ನನ್ನು ಕುರ್ಚಿಗೆ ಕಟ್ಟಿಹಾಕಿ ಭಯೋತ್ಪಾದಕ ಚಟುವಟಿಕೆ ನಡೆಸುವಂತೆ ಚಿತ್ರಹಿಂಸೆ ನೀಡಿದ್ದು, ನನ್ನ ಇಮೇಲ್, ನನ್ನ ಕುಟುಂಬ, ಪ್ರೇಯಸಿ ಸೇರಿದಂತೆ ನನ್ನ ಬಗ್ಗೆ ಸಮಗ್ರವಾಗಿ ಮಾಹಿತಿ ಕಲೆ ಹಾಕಿ ನನ್ನನ್ನು ದುರುಪಯೋಗ ಪಡಿಸಿಕೊಳ್ಳಲು ಹಾಗೂ ಅದಕ್ಕೆ ಒಪ್ಪಿಸಲು ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾನೆ.  ಒಂದು ಗುಪ್ತಸ್ಥಳಕ್ಕೆ ಕರೆದೊಯ್ದಿದ್ದ ಆ ಇಬ್ಬರು  ನನ್ನ ಕಣ್ಣ ಮುಂದೇಯೇ 18 ರಿಂದ 20 ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರವೆಸಗಿದರು. ಆಗ ಕನ್ನಡದಲ್ಲಿಯೇ ಮಾತನಾಡಿದ್ದರು ಎಂಬ ಸ್ಪೋಟಕ ಮಾಹಿತಿ ನೀಡಿದ್ದಾನೆ.

ನಿನ್ನ ಪ್ರೇಯಸಿ ಮೇಲೆಯೂ ಇದೇ ರೀತಿ ಅತ್ಯಾಚಾರ ಮಾಡುತ್ತೇವೆ ಎಂದು ನನಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ನನ್ನ ಸ್ನೇಹಿತೆಯ ಪ್ರಾಣಕ್ಕೂ ತೊಂದರೆಯಿದೆ. ಅವಳಿಗೂ ಭದ್ರತೆಯ ಅವಶ್ಯಕತೆ ಇದೆ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾನೆ. ನಾನು ಹೇಳುತ್ತಿರುವುದು ಸತ್ಯ, ತಾನು ಓದುತ್ತಿರುವ ವಿದ್ಯಾ ವಿಕಾಸ ಕಾಲೇಜನ್ನು ಸ್ಪೋಟಿಸುವುದಕ್ಕೆ ಪ್ರಚೋದನೆ ನೀಡಿದ್ದು ಸತ್ಯ. ಪೊಲೀಸರಿಗೆ ಈಗ ನಾನೊಬ್ಬ ಸಾಕ್ಷಿ, ಸೂಕ್ತ ತನಿಖೆ ನಡೆಸಿ ಉಗ್ರರನ್ನ ಬಂಧಿಸಬೇಕಿದೆ. ನಾನು ಪೊಲೀಸರಿಗೆ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಹೇಳುತ್ತಿದ್ದಾನೆ. ಕೆಲವರು ನಾನು ಮಾನಸಿಕ ಅಸ್ವಸ್ಥ.  ಪರೀಕ್ಷೆ ಬರೆಯಲಾಗದೇ ಹಾಗೂ ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಮುಂದಾದೆ ಎಂದು ಬಿಂಬಿಸಿರುವುದು ಸತ್ಯವಲ್ಲ. ಆ ಇಬ್ಬರು ವ್ಯಕ್ತಿಗಳು ನನ್ನನ್ನು ಭಯೋತ್ಪಾದಕ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರ ಚಹರೆ ಬಗ್ಗೆ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಲು ಸಿದ್ಧ. ಆದರೆ, ಅವರು ಎಲ್ಲಿಯವರು ಎನ್ನುವುದು ಗೊತ್ತಿಲ್ಲ. ಕರ್ನಾಟಕದಲ್ಲಿರುವ ಆ ಉಗ್ರ ಚಟುವಟಿಕೆಗೆ ಪ್ರೇರೇಪಿಸುವ ಅವರಿಬ್ಬರನ್ನು ಪತ್ತೆ ಮಾಡಿ. ಹಾಗೆಯೇ ನನ್ನ ಪ್ರೇಯಸಿ ಮತ್ತು ತಮ್ಮ ಕುಟುಂಬಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಇಂಜನಿಯರಿಂಗ್ ವಿದ್ಯಾರ್ಥಿ ಶರಣಪ್ಪ ನಾಗರಾಳ ಒತ್ತಾಯಿಸಿದ್ದಾನೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: