ಪ್ರಮುಖ ಸುದ್ದಿಮೈಸೂರು

ಜ.14-21: ರಂಗಾಯಣದಲ್ಲಿ ನಡೆಯಲಿದೆ ಬಹುರೂಪಿ ನಾಟಕೋತ್ಸವ : ಯುವ ಸ್ಪಂದನದ ಮೂಲಕ ಯುವಜನತೆಗೆ ನಾಡಿನ ಸಂಸ್ಕೃತಿ ಅರಿವು

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕ್ಯಾಲೆಂಡರ್ ನಲ್ಲಿ ಬಹುರೂಪಿಯನ್ನು ಪರಿಗಣಿಸಲು ಸರ್ಕಾರಕ್ಕೆ ಪತ್ರ : ಡಿ.ರಂದೀಪ್

ಮೈಸೂರು,ಜ.4:- ರಂಗಾಯಣದ ಕಲಾಮಂದಿರದಲ್ಲಿ ‘ವಲಸೆ’ ಶೀರ್ಷಿಕೆಯಡಿ ಬಹುರೂಪಿ ನಾಟಕೋತ್ಸವ ಜ.14ರಿಂದ 21ರವರೆಗೆ ನಡೆಯಲಿದ್ದು, ಈ ಬಾರಿ ‘ಯುವ ಸ್ಪಂದನ’ವನ್ನು ಹಮ್ಮಿಕೊಳ್ಳುವ ಮೂಲಕ ಯುವ ಜನತೆಗೆ ನಮ್ಮ ನಾಡಿನ ಸಂಸ್ಕೃತಿಯನ್ನು ಅರ್ಥೈಸಲಾಗುವುದು ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದರು.

ಮೈಸೂರಿನ ರಂಗಾಯಣದಲ್ಲಿ ನಡೆದ ಬಹುರೂಪಿ ಪೋಸ್ಟರ್ ಮತ್ತು ಟಿಕೇಟ್ ಬಿಡುಗಡೆಗೊಳಿಸಿ ಮಾತನಾಡಿದ ಅವರು 2001ರಲ್ಲಿ ಪ್ರಸನ್ನ ಅವರ ನೇತೃತ್ವದಲ್ಲಿ ಬಹುರೂಪಿ ಆರಂಭವಾಯಿತು. 17ವರ್ಷಗಳ ತನಕ ನಿರಂತರವಾಗಿ ಎಲ್ಲ ಭಾಷೆಗಳ ಮೂಲಕ ಬಹುರೂಪಿಯಾಗಿ ಹಲವಾರು ನಾಟಕಗಳು ಬಂದಿವೆ. ಈ ವರ್ಷ ನಾನೂ ಕೂಡ ಪಾಲ್ಗೊಳ್ಳುತ್ತಿರುವುದು  ಖುಷಿ ನೀಡಿದೆ ಎಂದರು. ಮಣಿಪುರದ ಅದ್ಭುತ ನಾಟಕ ನಿರ್ದೇಶಕ ರತನ್ ಶ್ಯಾಂ ಬರುತ್ತಿರುವುದು ಹೆಮ್ಮೆಯ ಸಂಗತಿ. ಅವರ ನಾಟಕದಿಂದ ಬಹಳಷ್ಟು ಕಲಿಯಬಹುದು. ರಾಷ್ಟ್ರೀಯ ಶಾಲೆಯ ನಿರ್ದೇಶಕರಾದ ಅನುರಾಧ ಕಪೂರ್ ಅವರು ಬರುತ್ತಿದ್ದು, ರಾಷ್ಟ್ರೀಯ ಪಶ್ರಸ್ತಿ ಪುರಸ್ಕೃತೆ ಸೀಮಾ ಬಿಸ್ವಾಸ್ ಏಕವ್ಯಕ್ತಿ ಪ್ರದರ್ಶನವಿದೆ. ಮರಾಠಿ, ಬಿಹಾರಿ,ಬೆಂಗಾಲಿ,ತೆಲುಗು, ತಮಿಳು, ಕೇರಳದ ಮಲಯಾಳಂ  ಭಾಷೆಯ ನಾಟಕಗಳು ಪ್ರದರ್ಶನಗೊಳ್ಳಲಿದೆ. ಕನ್ನಡದ ಒಂಭತ್ತು ನಾಟಕಗಳು ಪ್ರದರ್ಶನಗೊಳ್ಳಲಿವೆ. ಕಿರು ರಂಗಮಂದಿರದಲ್ಲಿ ಎಂಟು ಮಹಿಳೆಯರ ಏಕವ್ಯಕ್ತಿ ಪ್ರದರ್ಶನವಿದೆ. ಭೂಮಿಗೀತ, ಕಲಾಮಂದಿರ, ವನರಂಗದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಜನಪದ ನೃತ್ಯಗಳ ಪ್ರದರ್ಶನವೂ ಇದ್ದು, ಬೇರೆ ಬೇರೆ ಕಡೆಗಳಿಂದ ಆಗಮಿಸಿದ ನೃತ್ಯಪಟುಗಳು ನೃತ್ಯ ಪ್ರದರ್ಶಿಸಲಿದ್ದಾರೆ. ಈ ಬಾರಿ ಯುವ ಸ್ಪಂದನವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದು, ಬೇರೆ ಬೇರೆ  ಕಾಲೇಜುಗಳಿಂದ, ಹಳ್ಳಿಗಳಿಂದ ಯುವಕರು ಆಗಮಿಸಿ ಮುಕ್ಕಾಲುಗಂಟೆ ಜಾನಪದ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಯುವ ಜನತೆಗೆ ನಮ್ಮ ನಾಡಿನ ಸಂಸ್ಕೃತಿ  ಅರ್ಥಮಾಡಿಸಲು ಯುವ ಸ್ಪಂದನ ಹಮ್ಮಿಕೊಳ್ಳಲಾಗಿದೆ ಎಂದರು. 14ರಿಂದ 21ರವರೆಗೆ 8 ದಿನಗಳ ಕಾಲ ಬಹುರೂಪಿ ನಡೆಯಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಕರಕುಶಲ ಮಳಿಗೆಗಳಿರಲಿವೆ. ಮೈಸೂರಿನ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಬೀದಿನಾಟಕ ನಡೆಸುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಸಾಕ್ಷ್ಯಚಿತ್ರವನ್ನೊಳಗೊಂಡಂತೆ ವಲಸೆ ಯಡಿ ಬೇರೆ, ಬೇರೆ ದೇಶದ ಭಾಷೆಯ ಚಲನಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಸುಮಾರು 300 ಕಲಾವಿದರು ಭಾಗವಹಿಸಲಿದ್ದಾರೆ. ಇದೇ ವೇಳೆ ಇದೇ ಮೊದಲಬಾರಿಗೆ ಜಿಲ್ಲಾಧಿಕಾರಿಯೋರ್ವರು ರಂಗಾಯಣದ ಬಹುರೂಪಿ ಕುರಿತು ಆಸಕ್ತಿ ತಳೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಯಾವ ರೀತಿ ಮೈಸೂರಿನಲ್ಲಿ ದಸರಾ ನಡೆಯುತ್ತೋ ಅದೇ ರೀತಿ ಕಳೆದ ಎರಡ್ಮೂರು ವರ್ಷಗಳಿಂದ ಫಲಪುಷ್ಪ ಪ್ರದರ್ಶನ ವಿಶೇಷವಾಗಿ ಮಾಗಿ ಉತ್ಸವ ನಡೆಸಿದ್ದೇವೆ. ರಂಗಾಯಣದಲ್ಲಿ ಬಹುರೂಪಿಯೂ ನಡೆಯುತ್ತಿದೆ.  ಚಲನಚಿತ್ರೋತ್ಸವದಂತೆ, ನಾಟಕದ ಪ್ರಮುಖವಾದ ಕಾರ್ಯಕ್ರಮ ಬಹುರೂಪಿಯಾಗಿದ್ದು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕ್ಯಾಲೆಂಡರ್ ನಲ್ಲಿ ಬಹುರೂಪಿಯನ್ನೂ ಕೂಡ ಪ್ರಮುಖ ಕಾರ್ಯಕ್ರಮವಾಗಿ ಪರಿಗಣಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಪ್ರವಾಸೋದ್ಯಮ ಕ್ಯಾಲೆಂಡರ್ ನಲ್ಲಿಯೂ ಮೈಸೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂದರು. ಜ.14ರಂದು ಸಂಜೆ 5.30ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಬಹುರೂಪಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ , ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ಅವರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಾಯಣದ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಂಚಾಲಕ ಮೈಮ್ ರಮೇಶ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಚನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಜಿ.ಕೆ,ಎಸ್.ಎಚ್)

Leave a Reply

comments

Related Articles

error: