ಕರ್ನಾಟಕಪ್ರಮುಖ ಸುದ್ದಿ

ಫೆ.1ರಿಂದ ಐಎಸ್ ಐ ಮಾರ್ಕಿಲ್ಲದ ಹೆಲ್ಮೆಟ್ ಧರಿಸಿದರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ

ರಾಜ್ಯ(ಬೆಂಗಳೂರು)ಜ.4: – ಐಎಸ್‌ಐ ಮುದ್ರೆ ಹೊಂದಿರದ ಹಾಗೂ ಅರ್ಧ ಹೆಲ್ಮೆಟ್ ಧರಿಸುವ ಬೈಕ್ ಸವಾರರ ವಿರುದ್ಧ ಪೊಲೀಸರು ಫೆ.1ರಿಂದ ಕ್ರಮ ಜರುಗಿಸಲಿದ್ದಾರೆ.

ಕಳಪೆ ಹೆಲ್ಮೆಟ್ ಧರಿಸುವ ಸವಾರರ ವಿರುದ್ಧ ‘ಆಪರೇಷನ್ ಸೇಫ್‌ ರೈಡ್‌’ ಹೆಸರಿನಲ್ಲಿ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದ ಮೈಸೂರು ಪೊಲೀಸರು, 15,501 ಹೆಲ್ಮೆಟ್‌ಗಳನ್ನು ಜಪ್ತಿ ಮಾಡಿದ್ದರು. ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಬುಧವಾರ ಬೆಳಿಗ್ಗೆ ಡಿಜಿ–ಐಜಿಪಿ ನೀಲಮಣಿ ಎನ್‌.ರಾಜು ಹಾಗೂ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್‌.ಹಿತೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಗೃಹಸಚಿವ ರಾಮಲಿಂಗಾರೆಡ್ಡಿ, ‘ಮೈಸೂರು ಪೊಲೀಸರ ಮಾದರಿಯಲ್ಲೇ ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಬೇಕು. ಆ ಮೂಲಕ ಕಳಪೆ ಹೆಲ್ಮೆಟ್ ಧರಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದ್ದಾರೆ.

ಗುಣಮಟ್ಟದ ಹೆಲ್ಮೆಟ್ ಖರೀದಿಗೆ ನಾಗರಿಕರಿಗೆ ಜ.31ರವರೆಗೆ ಗಡುವು ನೀಡಿರುವ ಪೊಲೀಸರು, ಐಎಸ್‌ಐ ಹಾಗೂ ಬಿಐಎಸ್ ಮುದ್ರೆಯಿರುವ ಹೆಲ್ಮೆಟ್‌ಗಳನ್ನು ಮಾತ್ರ ಧರಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಂಡಿದ್ದಾರೆ. ಸಚಿವರ ಸೂಚನೆ ಬಳಿಕ ಎಲ್ಲ ವಲಯಗಳ ಐಜಿಪಿಗಳು ಹಾಗೂ ಕಮಿಷನರ್‌ಗಳಿಗೆ ಸುತ್ತೋಲೆ ಕಳುಹಿಸಿರುವ ಡಿಜಿ–ಐಜಿಪಿ, ‘ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರುವವರ ಹಾಗೂ ಅವುಗಳನ್ನು ಧರಿಸುವ ಸವಾರರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿ. ಹಾಗೆಯೇ ಎಷ್ಟು ಪ್ರಕರಣ ದಾಖಲಿಸಿದ್ದೀರಿ ಹಾಗೂ ಎಷ್ಟು ದಂಡ ಸಂಗ್ರಹಿಸಿದ್ದೀರಿ ಎಂಬ ಬಗ್ಗೆ ತಿಂಗಳಿಗೊಮ್ಮೆ ವರದಿ ಕಳುಹಿಸಿ ಎಂದು ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಸವಾರರು ಗುಣಮಟ್ಟದ ಹೆಲ್ಮೆಟ್‌ಗಳನ್ನೇ ಧರಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಅದರಂತೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಡಿಜಿ–ಐಜಿ‍ಪಿ ನೀಲಮಣಿ ರಾಜು ತಿಳಿಸಿದ್ದಾರೆ. ಕಡ್ಡಾಯವಾಗಿ ಐಎಸ್ ಐ ಹೆಲ್ಮೆಟ್ ಜಾರಿಯಾಗಲಿದ್ದು, ಫೆಬ್ರವರಿ 1ರಿಂದ ಧರಿಸದೇ ಹೋದ ದ್ವಿಚಕ್ರವಾಹನ ಸವಾರರ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: