ಸುದ್ದಿ ಸಂಕ್ಷಿಪ್ತ

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಅವಧಿ ವಿಸ್ತರಣೆ

ಮಡಿಕೇರಿ,ಜ.4-ಜನವರಿ 1 ಅನ್ನು ಅರ್ಹತಾ ದಿನವಾಗಿ ಇಟ್ಟುಕೊಂಡು ನಡೆಸುವ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2018ರ ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಭಾರತ ಚುನಾವಣಾ ಆಯೋಗ ಜ.12 ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ಜ.1 ರಿಂದ 12ರವರೆಗೆ ವಿಶೇಷ ಆಂದೋಲನ ಕಾರ್ಯಕ್ರಮವನ್ನು ನಡೆಸಲು ಸೂಚಿಸಿದ್ದು, ಅದರಂತೆ ಜ.1ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮತ್ತು 18 ವರ್ಷ ಮೇಲ್ಪಟ್ಟ ನಾಗರೀಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ವಂಚಿತರಾಗಿದ್ದಲ್ಲಿ ಮತದಾರರ ಪಟ್ಟಿಗೆ ಸೇರಿಸಬಹುದು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರು ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರು ತೆಗೆಯಲು, ಮತದಾರರ ಗುರುತಿನ ಚೀಟಿಯಲ್ಲಿ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಬಹುದು.

ಒಂದು ವಿಧಾನ ಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ವಿಶೇಷ ಆಂದೋಲನ ಅವಧಿಯಲ್ಲಿ ಅಂದರೆ ಜ.12 ರವರೆಗೆ ನಿಮ್ಮ ಗ್ರಾಮದ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ತಾಲೂಕು ಕಚೇರಿಗಳಿಗೆ ನಿಗಧಿತ ನಮೂನೆಗಳಲ್ಲಿ (ನಮೂನೆ-6 ಸೇರ್ಪಡೆ, ನಮೂನೆ-7 ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ನಮೂನೆ-8 ತಿದ್ದುಪಡಿಗಾಗಿ ಮತ್ತು ನಮೂನೆ-8ಎ ಒಂದು ವಿಧಾನ ಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ) ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಬಹುದು.

Leave a Reply

comments

Related Articles

error: