ಪ್ರಮುಖ ಸುದ್ದಿಮೈಸೂರು

ನೋಟು ರದ್ದು ಎಫೆಕ್ಟ್: ಪಾಲಿಕೆಯಲ್ಲಿ 6.75 ಕೋಟಿ ರು. ತೆರಿಗೆ ಸಂಗ್ರಹ

ಕೇಂದ್ರ ಸರಕಾವು 500 ಮತ್ತು 1000 ರು. ನೋಟುಗಳನ್ನು ರದ್ದು ಮಾಡಿದ್ದಕ್ಕೆ ಮೈಸೂರು ನಗರ ಪಾಲಿಕೆಯ ಕಂದಾಯ ಇಲಾಖೆಯು ಧನ್ಯವಾದ ಸಲ್ಲಿಸಲೇಬೇಕು. ಏಕೆಂದರೆ, ಇಷ್ಟು ದಿನ ತೆರಿಗೆ, ಮನೆ ಕಂದಾಯ ಕಟ್ಟುವಂತೆ ಪಾಲಿಕೆ ಸಾರ್ವಜನಿಕರ ಬಳಿ ಎಷ್ಟೇ ಮನವಿ ಮಾಡಿಕೊಂಡಿದ್ದರೂ, ಸೊಪ್ಪು ಹಾಕುತ್ತಿರಲಿಲ್ಲ. ಈಗ ಮೋದಿ ಅವರು ದಿಢೀರನೆ ನೋಟು ರದ್ದು ಮಾಡುತ್ತಿದ್ದಂತೆ ಜನ ತಾ ಮುಂದು ನಾ ಮುಂದು ಎಂದು ಬಾಕಿ ಸೇರಿ ಮುಂಗಡ ತೆರಿಗೆ ಹಣ ಪಾವತಿಸಿದ್ದಾರೆ.

ಪಾಲಿಕೆಯು ಕಳೆದ ನಾಲ್ಕು ದಿನಗಳಲ್ಲಿ 6.75 ಕೋಟಿ ರು. ನೀರು ಮತ್ತು ಆಸ್ತಿ ತೆರಿಗೆ ಸಂಗ್ರಹಿಸಿದೆ. ಮೂರು- ನಾಲ್ಕು ವರ್ಷಗಳಿಂದ ತೆರಿಗೆ ಕಟ್ಟದವರೆಲ್ಲ ತೆರಿಗೆ ಕಟ್ಟಿದ್ದಾರೆ. ನ.24ರವರೆಗೂ ಪಾಲಿಕೆಯು ಹಳೆಯ ನೋಟುಗಳನ್ನು ಸ್ವೀಕರಿಸಲಿದ್ದು, ತೆರಿಗೆ ಮೊತ್ತ ಸಂಗ್ರಹ ಇನ್ನಷ್ಟು ಹೆಚ್ಚಲಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೇಯರ್ ಬಿ.ಎಲ್. ಭೈರಪ್ಪ, ನಾವು ಯಾವತ್ತೂ ಇಷ್ಟು ಕಡಿಮೆ ದಿನದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ತೆರಿಗೆಯನ್ನು ಸಂಗ್ರಹಿಸಿಲ್ಲ. 3 ಕೋಟಿ ಮತ್ತು 3.75 ಕೋಟಿ ರು. ಅನ್ನು ನೀರು ಮತ್ತು ಆಸ್ತಿ ತೆರಿಗೆಯಾಗಿ ಸ್ವೀಕರಿಸಿದ್ದೇವೆ. ನ.24ರೊಳಗೆ ಎರಡು ಅಂಕಿ ದಾಟುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರದ್ದಾಗಿರುವ ನೋಟುಗಳನ್ನು ನವೆಂಬರ್ 24ರ ಸಂಜೆ 6 ಗಂಟೆಯವರೆಗೆ ಸ್ವೀಕರಿಸಲಾಗುತ್ತದೆ ಎಂದು ಮೇಯರ್ ತಿಳಿಸಿದರು.

Leave a Reply

comments

Related Articles

error: