ಮೈಸೂರು

ಗ್ರಂಥಾಲಯಗಳು ವಿವಿಗಳ ಆತ್ಮವಿದ್ದಂತೆ: ಪ್ರೊ. ಬಿ. ಶೇಕ್ ಅಲಿ

liabrary-2ಗ್ರಂಥಾಲಯಗಳು ವಿಶ್ವವಿದ್ಯಾಲಯದ ಆತ್ಮವಿದ್ದಂತೆ. ಪುಸ್ತಕ ಮನುಷ್ಯನ ಒಳ್ಳೆಯ ಸಂಗಾತಿ, ಅದು ಅವನನ್ನು ಪ್ರೇರೇಪಿಸುವುದು, ಸಂವೇದಿಸುವುದು, ಮನೋಲ್ಲಾಸ ನೀಡಿ ಹಾಗೂ ಜ್ಞಾನಾಭಿವೃದ್ಧಿಗೊಳಿಸುವುದು ಎಂದು ಮಂಗಳೂರು ಹಾಗೂ ಗೋವಾ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿ ಪ್ರೊ. ಬಿ.ಶೇಕ್ ಅಲಿ ಅಭಿಪ್ರಾಯಪಟ್ಟರು.

ಅವರು, ಶುಕ್ರವಾರದಂದು ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಗಾಂಧಿ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ “ಗಾಂಧಿಜೀಯ ಜೀವನದಲ್ಲಿ ಗ್ರಂಥಾಲಯ” ವಿಷಯವಾಗಿ ಮಾತನಾಡಿದರು.

ಅರಿಸ್ಟಾಟಲ್, ಬುದ್ಧ, ಬಸವ, ಮಹಾತ್ಮಗಾಂಧಿ, ವಿವೇಕಾನಂದ, ಮುಂತಾದ ಮಹನೀಯರನ್ನು ಗ್ರಂಥಗಳ ಮೂಲಕ ಜೀವಂತವಾಗಿರಿಸಿದ್ದು ಗ್ರಂಥಾಲಯಗಳೇ. ಅವರ ಸಂದೇಶಗಳು ಗ್ರಂಥ ರೂಪದಲ್ಲಿ ದಾಖಲಾಗಿವೆ. ಮಹಾತ್ಮ ಗಾಂಧೀಜಿ ಎಲ್ಲ ಧರ್ಮಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳಲ್ಲಿನ ಶ್ರೇಷ್ಠತೆಯನ್ನು ಆಯ್ದುಕೊಂಡು ಸತ್ಯ ಹಾಗೂ ಅಹಿಂಸೆಯ ಆರಾಧಕರಾಗಿದ್ದರು. ಸತ್ಯ ಎನ್ನುವುದು ಕನ್ನಡಿಯಂತೆ. ಸತ್ಯ, ನ್ಯಾಯ, ಮಾನವೀಯತೆ ಹಾಗೂ ಮನೋಕಲ್ಪನೆ ಮೌಲ್ಯಯುತ ಜೀವನದ ಅಗತ್ಯಗಳಾಗಿವೆ. ಜೀವನ ಚದುರಂಗದಾಟ, ಮಾನವನ ಮೆದುಳು ಭಗವಂತನ ಅದ್ಭುತ ಸೃಷ್ಠಿ. ಆಧ್ಯಾತ್ಮದ ಮಾತೃಭೂಮಿ ಭಾರತ. ರಾಷ್ಟ್ರಪಿತ ಮಾಹಾತ್ಮ ಗಾಂಧೀಜಿಯವರ ಸತ್ಯ-ಅಹಿಂಸೆಯ ಮಾರ್ಗವನ್ನು ಅನುಸರಿಸಿದರೆ ದೇಶ ಇಂದಿಗೂ ಜಗತ್ತಿನ ಗುರುವಾಗುವುದು. ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ. ರಾಜಣ್ಣ ಅವರು ಮಾತನಾಡಿ, ಶತಮಾನೋತ್ಸವ ಆಚರಿಸಿಕೊಂಡ ಮೈಸೂರು ವಿ.ವಿ.ಯ ಸುಸಜ್ಜಿತ ಗ್ರಂಥಾಲಯವು ಬ್ರಿಟನ್ನಿನ ಲಂಡನ್ ಗ್ರಂಥಾಲಯದಂತೆ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಡಿಜಿಟಲೀಕರಣಗೊಂಡ ನಂತರ ಮತ್ತಷ್ಟು ಉತ್ತಮವಾಗಿದೆ. ಮನುಷ್ಯನಿಗೆ ಮೆದುಳು ಹೇಗೆ ಮುಖ್ಯವೋ ವಿವಿಗೆ ಗ್ರಂಥಾಲಯಗಳು ಅಷ್ಟೇ ಮುಖ್ಯ. ಇಲ್ಲಿ ಓದಿದ ಹಲವಾರು ಮೇಧಾವಿಗಳು ಶೇಷ್ಠತೆಯ ಉತ್ತುಂಗಕ್ಕೇರಿದ್ದಾರೆ. ವಾಣಿಜ್ಯ, ವೈದ್ಯಕೀಯ, ಇತಿಹಾಸ ಸೇರಿದಂತೆ ಎಲ್ಲ ವಿಷಯಗಳ ಉತ್ತಮ ಪುಸ್ತಕಗಳಿವೆ. ಐಎಎಸ್, ಐಪಿಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೇಳಿ ಮಾಡಿಸಿದಂತ ಗ್ರಂಥಾಲಯವಿದು. ಮಾನಸಗಂಗೋತ್ರಿ ಗ್ರಂಥಾಲಯವನ್ನು ನೋಡಲು ಇತರೆ ವಿವಿಗಳ ವಿದ್ಯಾರ್ಥಿಗಳು ಆಗಮಿಸುವಷ್ಟು ಪ್ರಖ್ಯಾತಿ ಪಡೆದಿದೆ. ಇಲ್ಲಿ ಓದಿದ ಹಲವರು ದೇಶದ ಅತ್ಯುನ್ನತ ಸ್ಥಾನ ಪಡೆದಿದ್ದಾರೆ. ಓದಿನ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಿ. ವಿವಿಯ ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಆಶಿಸಿದರು.
ವಿ.ವಿ.ಯಲ್ಲಿ ನ.14 ರಿಂದ 20 ರ ವರೆಗೆ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಡಾ. ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಸ್. ಶಿವರಾಜಪ್ಪ, ಗ್ರಂಥಪಾಲಕ ಡಾ. ಆರ್.ಟಿ.ಡಿ. ರಮೇಶ್ ಗಾಂಧಿ ಸ್ವಾಗತಿಸಿದರು, ಡಾ.ಪಿ. ಸರಸ್ವತಿ ವಂದಿಸಿದರು. ಮಂಜುಳ ಪ್ರಾರ್ಥಿಸಿದರು, ಸಹಾಯಕ ಗ್ರಂಥಪಾಲಕ ವೆಂಕಟೇಶ್ ನಿರೂಪಿಸಿದರು.

Leave a Reply

comments

Related Articles

error: