ಮೈಸೂರು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಮನವಿ

ಮೈಸೂರು,ಜ.5:- ಭಯೋತ್ಪಾದಕ ಬೆಂಬಲಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷದ್, ಬಜರಂಗದಳ ಜಿಲ್ಲಾ ಘಟಕ ಮೈಸೂರು ವತಿಯಿಂದ ರಾಮಸ್ವಾಮಿವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ಪ್ರತಿಭಟನೆ ನಡೆಯಿತು.

ಶುಕ್ರವಾರ ರಾಮಸ್ವಾಮಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಮಾತನಾಡಿ ಕಳೆದ 10 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಭಯೋತ್ಪಾದಕ ಸಿಮಿ ಸಂಘಟನೆ ಬೆಂಬಲಿತ ಕೆ.ಎಫ್.ಡಿ.ಹೆಸರಿನಲ್ಲಿ ಕಾರ್ಯಾನಿರ್ವಹಿಸುತ್ತಿದ್ದ ಸಂಘಟನೆಯನ್ನು ರಾಜ್ಯ ಸರ್ಕಾರವು ನಿರ್ಬಂಧಗೊಳಿಸಿದ ನಂತರ ಆ ಸಂಘಟನೆಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಈ ಪಿಎಫ್ ಐ ಸಂಘಟನೆಯು ಮುಸ್ಲಿಂ ಉಗ್ರವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು ಈ ದೇಶವನ್ನು ಇಸ್ಲಾಮೀಕರಣಗೊಳಿಸಬೇಕೆಂಬ ಗುರಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಹಿಂದುತ್ವಕ್ಕಾಗಿ ಕೆಲಸ ಮಾಡುವ ಹಿಂದೂ ಯುವಕರು,ಹಿಂದೂ ಮುಖಂಡರನ್ನು ಕೇಂದ್ರವನ್ನಾಗಿಸಿ ಅವರನ್ನು ಬರ್ಬರವಾಗಿ ಹತ್ಯೆಗೈಯ್ಯುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಮಂಗಳೂರಿನಲ್ಲಿ ಹತ್ಯೆಯಾದ ದೀಪಕರಾವ್ ಅವರ ಹತ್ಯೆಯು ಮುಸ್ಲಿಂ ಜಿಹಾದಿಗಳ ಷಡ್ಯಂತ್ರಕ್ಕೆ ಬಲಿಯಾದ  21ನೇ ಹತ್ಯೆಯಾಗಿದೆ. ರಾಜ್ಯ ಸರ್ಕಾರದ ಮುಸ್ಲಿಂ ತುಷ್ಠೀಕರಣ ನೀತಿಯೇ ಇದಕ್ಕೆ ಕಾರಣ ಕೂಡಲೇ ಪಿಎಫ್ ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

ಬಿಜೆಪಿ, ಬಜರಂಗದಳದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: