
ಮೈಸೂರು
ಎಂಎಲ್ಸಿಗಳ ವರ್ತನೆ ಸರಿಯಿಲ್ಲ: ಎಂ.ಲಕ್ಷ್ಮಣ್ ಆರೋಪ
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಶಿಕ್ಷಕರ ಮತ್ತು ಪಿಯು ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಧಾರ ತಗೆದುಕೊಳ್ಳಲು ಎಲ್ಲ ಅಧಿಕಾರಿಗಳ ಮತ್ತು ಕ್ಷೇತ್ರವನ್ನು ಪ್ರತಿನಿಧಿಸುವ ಎಂಎಲ್ಸಿಗಳನ್ನೊಳಗೊಂಡಂತೆ ನ.16ರಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ಐತಿಹಾಸಿಕ ಸಭೆಯನ್ನು ಕರೆಯಲಾಗಿತ್ತು. ಆದರೆ ಎಂಎಲ್ಸಿಗಳು ಸಭೆಯನ್ನು ಬಹಿಷ್ಕರಿಸಿ ಊಟ ಮುಗಿಸಿಕೊಂಡು ಹೊರನಡೆದದ್ದು ಶಿಕ್ಷಕರಿಗೆ ಮಾಡಿದ ದ್ರೋಹ ಎಂದು ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ ಆರೋಪಿಸಿದರು.
ಪತ್ರಕರ್ತಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ 60 ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲು ಸಂಬಂಧಪಟ್ಟ ಕಡತಗಳೊಂದಿಗೆ ಹಾಜರಿದ್ದರು. ಸಚಿವ ತನ್ವೀರ್ ಸೇಠ್ ಟಿಪ್ಪು ಜಯಂತಿ ದಿನದಂದು ಅಶ್ಲೀಲ ದೃಶ್ಯಗಳನ್ನು ನೋಡಿದ್ದಾರೆ ಎಂಬ ವಿಚಾರಕ್ಕೆ ಈಗಾಗಲೇ ನ್ಯಾಯಾಲಯದಿಂದ ಈ ವಿಚಾರವನ್ನು ಯಾರು ಚರ್ಚಿಸಬಾರದೆಂದು ಆದೇಶ ನೀಡಿದ್ದರೂ ಎಂಎಲ್ಸಿಗಳು ಮಾಧ್ಯಮಗಳ ಮುಂದೆ ತನ್ವೀರ್ ಸೇಠ್ ವಿರುದ್ಧ ಧಿಕ್ಕಾರಗಳನ್ನು ಮುಂದೆ ಕೂಗುತ್ತಾ ಹೊರನಡೆದದ್ದು ಪ್ರಚಾರಕ್ಕಾಗಿ. ಈ ತಪ್ಪನ್ನು ಕೂಡಲೇ ತಿದ್ದಿಕೊಂಡು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ತುರ್ತಾಗಿ ಮಂತ್ರಿಗಳನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆಂದು ಎಲ್ಲ ಎಂಎಲ್ಸಿಗಳಿಗೆ ಆಗ್ರಹಿಸಿದರು.
ಅಲ್ಲದೇ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಅಜಯ್ ಕುಮಾರ್ ಸರ್ಕಾರಕ್ಕೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ, ಅವರನ್ನು ಈ ಇಲಾಖೆಯಿಂದ ತೆಗೆದು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಧಿಕಾರಿಯನ್ನು ನೇಮಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬಾರಳ್ಳಿ ಪ್ರಕಾಶ್ ಹಾಜರಿದ್ದರು.