ಮೈಸೂರು

ರೇಸ್ ಕ್ಲಬ್‍ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬೇಡಿ: ಸಾ.ರಾ.ಮಹೇಶ್

ರೇಸ್ ಕ್ಲಬ್ ಗುತ್ತಿಗೆದಾರರು ಸಾವಿರಾರು ಕೋಟಿ ರು. ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಅಲ್ಲದೇ ಅನಗತ್ಯವಾಗಿ ರೇಸ್ ಕ್ಲಬ್‍ನಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ರದ್ದುಪಡಿಸಬೇಕು. ಇದಕ್ಕಾಗಿ ಸರ್ಕಾರ ನೀಡಿರುವ ಸಾವಿರಾರು ಕೋಟಿ ರು.ಗಳನ್ನು ವಾಪಸ್ಸು ಪಡೆಯಬೇಕು. ಇಲ್ಲವಾದಲ್ಲಿ ಮೈಸೂರಿನ ಪರಿಸರ ಹಾಳಾಗುತ್ತದೆ ಎಂದು ಕೆ.ಆರ್. ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ, ಸಚಿವರಾದ ಮಹದೇವ ಪ್ರಸಾದ್, ಮಹದೇವಪ್ಪ, ಮತ್ತು ಅಂಬರೀಶ್ ಅವರಿಗೆ ಮನವಿ ಸಲ್ಲಿಸಿದ್ದರೂ ಸಹ ಅವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಲೋಕೋಪಯೋಗಿ ಇಲಾಖೆ ರೇಸ್ ಕ್ಲಬ್ ಜೊತೆ ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದೆ ಎಂದು ಆರೋಪಿಸಿದರು.

2006ರಿಂದ 2016ರವರೆಗೆ ರೇಸ್ ಕ್ಲಬ್ ನವರು ಸರ್ಕಾರಕ್ಕೆ ಕಟ್ಟಬೇಕಾದ ವ್ಯತ್ಯಾಸದ ಮೊಬಲಗು ಬಡ್ಡಿ ಸೇರಿ ಒಟ್ಟು 1 ಕೋಟಿ 14 ಲಕ್ಷ ರು.ಗಳು. ಮತ್ತು 3ರಿಂದ 4 ಕೋಟಿ ರು. ಸೇವಾ ತೆರಿಗೆಯನ್ನು ಲೋಕೋಪಯೋಗಿ ಇಲಾಖೆಗೆ ಕಟ್ಟಬೇಕು ಎಂದು ಹೇಳಿದರು.

2006 ರಿಂದ 2010ರವರೆಗೆ ರೇಸ್ ಕ್ಲಬ್‍ನ ನವೀಕರಣ ಮಾಡಿರಲಿಲ್ಲ. ನಂತರ 2012 ರಲ್ಲಿ ನವೀಕರಣ ಮಾಡಿ ಸರ್ಕಾರ ಒಂದು ಷರತ್ತು ವಿಧಿಸಿತ್ತು. 75 ಸಾವಿರ ದಿಂದ 2 ಲಕ್ಷ ರು. ಕಟ್ಟುತ್ತಿದ್ದ ಬಾಡಿಗೆಯನ್ನು ಬದಲುಮಾಡಿ ತಮ್ಮ ಆದಾಯದಲ್ಲಿ ಶೇ.2ರಷ್ಟು ಕಟ್ಟಬೇಕು ಎಂದು ಹೇಳಿತು. ಆದರೆ, ರೇಸ್ ಕ್ಲಬ್ ನವರು ಈ ವಿಷಯದಲ್ಲಿ ಸರ್ಕಾರಕ್ಕೆ ವಂಚನೆ ಎಸಗಿದ್ದಾರೆ.

ರೇಸ್ ಕ್ಲಬ್ ಅನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸಬೇಕು. ಈ ಜಾಗವನ್ನು ಜೂಜಿಗೆ ನೀಡಿರುವುದು ಸರಿಯಲ್ಲ. ಇಲ್ಲಿ ಬಲಿಯಾಗುತ್ತಿರುವವರು ಶ್ರೀಮಂತರಲ್ಲ.  ಬಡವರು, ಆಟೋ ಚಾಲಕರು. ಆದ್ದರಿಂದ, ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಬಾಕಿ ವಸೂಲಿ ಮಾಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜಣ್ಣ, ಲಿಂಗಪ್ಪ, ರವಿಚಂದ್ರೇಗೌಡ, ಕೆ.ವಿ.ಮಲ್ಲೇಶ್, ಎಸ್.ಬಿ.ಎಂ.ಮಂಜು ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: