
ಕರ್ನಾಟಕ
ಪರೀಕ್ಷೆ ಬಗ್ಗೆ ಭಯ ಬೇಡ – ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ – ಚೇತನ್ ರಾಮ್
ರಾಜ್ಯ(ಮಡಿಕೇರಿ) ಜ.5: – ಪರೀಕ್ಷೆಯ ಬಗ್ಗೆ ಅನಗತ್ಯ ಆತಂಕ, ಭಯ, ತಲ್ಲಣ ತಾಳದೇ ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮಿಸಿ ಎಂದು ಹೆಸರಾಂತ ವ್ಯಕ್ತಿತ್ವ ವಿಕಸನ ತರಬೇತುದಾರ ಮೈಸೂರಿನ ಚೇತನ್ ರಾಮ್ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಬಿಇಓ ಕಚೇರಿಗಳ ಸಂಯುಕ್ತಾಶ್ರಯದಲ್ಲಿ ಸಂತ ಜೋಸೆಫರ ಕಾನ್ವೆಂಟ್ ಸಭಾಂಗಣದಲ್ಲಿ ಮಡಿಕೇರಿ ತಾಲೂಕಿನ ಎಸ್ ಎಸ್ ಎಲ್ ಸಿ. 1 ಸಾವಿರ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಾಗಾರದಲ್ಲಿ ಮಾತನಾಡಿದ ಚೇತನ್ ರಾಮ್, ಪಠ್ಯ ಪುಸ್ತಕ ಎಂಬುದು ಪ್ರತಿಯೋರ್ವ ವಿದ್ಯಾರ್ಥಿಗೂ ತಾಯಿಯಿದ್ದಂತೆ. ತಾಯಿ ನೀಡುವ ಮಾರ್ಗದರ್ಶನವನ್ನೇ ನೀಡುವ ಪಠ್ಯ ಪುಸ್ತಕದ ಓದೇ ಪ್ರತಿಯೋರ್ವ ವಿದ್ಯಾರ್ಥಿಗೂ ಮುಖ್ಯವಾಗಬೇಕು. ಪಠ್ಯ ಪುಸ್ತಕಗಳಿಗಿಂತ ಗೈಡ್, ಇಂಟರ್ ನೆಟ್ ಮತ್ತಿತರ ಪರ್ಯಾಯ ಮಾಧ್ಯಮಗಳನ್ನು ಬಳಸಿಕೊಂಡರೂ ಅಮ್ಮನಂಥ ಪಠ್ಯ ಪುಸ್ತಕಕ್ಕೆ ಇವು ಯಾವುವೂ ಸಮಾನವಲ್ಲ ಎಂದು ಪ್ರತಿಪಾದಿಸಿದರು. ಪರೀಕ್ಷೆಯಲ್ಲಿ ನಿಗದಿ ಪಡಿಸಿದ ಸಮಯಕ್ಕೆ ಅನುಗುಣವಾಗಿ ಉತ್ತರ ಬರೆಯಬೇಕು, ಅಂಕ ಮತ್ತು ಮೀಸಲಿರಿಸಿದ ಜಾಗ ಎಷ್ಟಿದೆ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಷ್ಟೇ ವಾಕ್ಯಗಳನ್ನು ಬರೆಯಬೇಕು ಎಂದು ಹೇಳಿದ ಚೇತನ್ ರಾಮ್, ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಮಯದ ಸಮಸ್ಯೆ ಇತ್ತು ಎಂದು ಹೇಳುವುದೇ ಸುಳ್ಳು. ಸರಿಯಾಗಿ ವಿಷಯ ತಿಳಿದುಕೊಂಡಿದ್ದರೆ ನಿಗದಿತ ಸಮಯದಲ್ಲಿಯೇ ಅತ್ಯುತ್ತಮ ಉತ್ತರಗಳನ್ನು ಬರೆಯಲು ಸಾಧ್ಯವಿದೆ ಎಂದು ಹೇಳಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆ ಪ್ರತಿಯೋರ್ವ ವಿದ್ಯಾರ್ಥಿಯ ಜೀವನ ಬದಲಿಸುವ ಪ್ರಮುಖ ಘಟ್ಟವಾಗಿದ್ದು, ಹೀಗಾಗಿ ಇದನ್ನು ಎಲ್ಲಾ ಪೂರ್ವತಯಾರಿಗಳೊಂದಿಗೆ ಸಮರ್ಥವಾಗಿ ಎದುರಿಸಬೇಕೆಂದು ಚೇತನ್ ರಾಮ್ ಕರೆ ನೀಡಿದರು. ಪರೀಕ್ಷೆ ಎಂದರೆ ಯುದ್ದವಲ್ಲ, ಯಾರ ವಿರುದ್ದವೂ ವಿದ್ಯಾರ್ಥಿ ಹೋರಾಟ ಕೈಗೊಳ್ಳುತ್ತಿಲ್ಲ. ಹೀಗಾಗಿ ಭಯ, ಹೋರಾಟ ಮನೋಭಾವ ಬಿಟ್ಟು ಹಬ್ಬಕ್ಕೆ ತೆರಳುವ ಸಂಭ್ರಮದೊಂದಿಗೆ ಪರೀಕ್ಷೆಗೆ ತೆರಳುವ ಮಾನಸಿಕ ಸಿದ್ದತೆಯಲ್ಲಿ ವಿದ್ಯಾರ್ಥಿ ತೊಡಗಿಸಿಕೊಳ್ಳುವಂತೆಯೂ ಅವರು ಸಲಹೆ ನೀಡಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಏಕಾಂಗಿಯಾಗಿ ತಯಾರಿ ಕೈಗೊಳ್ಳುವ ಬದಲಿಗೆ ಗುರುಗಳು ಅಥವಾ ಸಹಪಾಠಿಗಳೊಂದಿಗೆ ಸಿದ್ದತೆ ಕೈಗೊಳ್ಳಿ ಎಂದು ಕಿವಿಮಾತು ಹೇಳಿದ ಚೇತನ್ ರಾಮ್, ಪರೀಕ್ಷೆ ಹತ್ತಿರವಿರುವ 3 ತಿಂಗಳ ಕಾಲ ಆರೋಗ್ಯ ಸಂರಕ್ಷಣೆ ಮುಖ್ಯವಾಗಿದ್ದು ಮನೆಯಿಂದ ಹೊರತುಪಡಿಸಿ ಹೊರಗಿನ ಆಹಾರ, ನೀರು ಸೇವಿಸದಿರಿ. ಎಣ್ಣೆ ಪದಾರ್ಥಗಳನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡಿದರು. ಪರೀಕ್ಷೆಗೆ ಓದಿಬರೆದು, ಬರೆದು ಓದುವ ಕ್ರಮವನ್ನು ಅಳವಡಿಸಿಕೊಂಡರೆ ಜ್ಞಾಪನಾ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ ಪರೀಕ್ಷಾ ದಿನ ಸಲೀಸಾಗಿ ಉತ್ತರ ಬರೆಯಲು ಸಾಧ್ಯವಾಗುತ್ತದೆ ಎಂದೂ ಚೇತನ್ ರಾಮ್ ಅಭಿಪ್ರಾಯಪಟ್ಟರು. ಪರೀಕ್ಷೆಗೆ ಮುನ್ನ ಕೆಲವು ದಿನಗಳಿರುವಾಗಲೇ ಕೈಗೊಳ್ಳುವ ಪೂರಕ ವ್ಯವಸ್ಥೆಯು ವಿದ್ಯಾರ್ಥಿಗೆ ಭಗವದ್ಗೀತೆ ಇದ್ದಂತೆ ಎಂದೂ ಅವರು ಹೇಳಿದರು. ಪೂರಕ ವ್ಯವಸ್ಥೆಯಿಂದಲೇ ಶೇ.60 ಅಂಕಗಳು ಖಂಡಿತಾ ಲಭಿಸುತ್ತದೆ ಎಂದೂ ಚೇತನ್ ರಾಮ್ ಅನಿಸಿಕೆ ವ್ಯಕ್ತಪಡಿಸಿದರು. ದಡ್ಡ ಎಂಬ ಪದವನ್ನು ಯಾರಿಗೂ ಬಳಸಬೇಡಿ ಎಂದು ಹೇಳಿದ ಅವರು ದಡ್ಡ ವಿದ್ಯಾರ್ಥಿ ಇನ್ನೂ ಹುಟ್ಟಿಯೇ ಇಲ್ಲ. ಪ್ರತಿಯೋರ್ವನಲ್ಲಿಯೂ ಅಪಾರವಾದ ಬುದ್ದಿಶಕ್ತಿಯಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ಮುಖ್ಯ ಎಂದು ತಿಳಿಸಿದರು. ಪರೀಕ್ಷೆ ಎಂದು ಆತಂಕ, ಕಿನ್ನತೆಗೊಳಗಾಗದೇ ಅತ್ಯಂತ ಸಂತೋಷವಾಗಿರಿ, ಧೈರ್ಯವಾಗಿರಿ, ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ಸಂಶಯವಿರುವ ಪ್ರಶ್ನೆಗಳಿಗೆ ಉತ್ತರಕ್ಕೆ ನಂತರ ಪ್ರಯತ್ನಿಸಿ ಎಂದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಖ್ಯಾತ ಮನೋಶಾಸ್ತ್ರಜ್ಞ ಡಾ.ರೂಪೇಶ್ ಗೋಪಾಲ್ ಮಾತನಾಡಿ,ಪರೀಕ್ಷೆಯ ಸಂದರ್ಭದ ಆತಂಕ ಸಹಜವಾಗಿಯೇ ಮಾನಸಿಕ, ದೈಹಿಕವಾಗಿಯೂ ವಿದ್ಯಾರ್ಥಿ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಇಂಥ ಒತ್ತಡ ತಡೆಯುವ ಶಕ್ತಿಯಿಲ್ಲದೇ, ಆತ್ಯಹತ್ಯೆಯಂಥ ವಿಚಾರಗಳತ್ತ ಗಮನ ಹರಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಪರೀಕ್ಷೆ ಬಗ್ಗೆ ಆತಂಕಗೊಳ್ಳದೇ ಮಾನಸಿಕ ಪೂರ್ವ ಸಿದ್ದತೆಯೊಂದಿಗೆ ಪರೀಕ್ಷೆಯನ್ನು ನಿಭಾಯಿಸಿ ಎಂದು ಹೇಳಿದರು. ಆಕಸ್ಮಾತ್ ಪರೀಕ್ಷೆಯಲ್ಲಿ ನಪಾಸ್ ಆದರೂ ಪರವಾಗಿಲ್ಲ. ಆದರೆ, ಸಾವಿಗೆ ಶರಣಾಗಿ ಜೀವನದ ಪರೀಕ್ಷೆಯಲ್ಲಿ ನಪಾಸಾಗದಿರಿ ಎಂದೂ ಅವರು ಕಿವಿಮಾತು ಹೇಳಿದರು.
ಡಾ.ಪ್ರಶಾಂತ್, ಹೆಸರಾಂತ ನೇತ್ರ ತಜ್ಞ ಡಾ.ಸಿ.ಆರ್.ಪ್ರಶಾಂತ್, ಹಿರಿಯ ಪತ್ರಕರ್ತ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಕಾರ್ಯದರ್ಶಿ ಪಿ.ಎಂ.ಸಂದೀಪ್, ಜೋನಲ್ ಲೆಫ್ಟಿನೆಂಟ್ ವಿನೋದ್ ಕುಶಾಲಪ್ಪ, ಯೋಜನಾ ನಿರ್ದೇಶಕ ಎಂ.ಧನಂಜಯ್ ಹಾಜರಿದ್ದರು. (ಕೆಸಿಐ,ಎಸ್.ಎಚ್)