ಪ್ರಮುಖ ಸುದ್ದಿಮೈಸೂರು

ಪೊಲೀಸರಿಗೆ ವಿವಿಧ ಸೌಲಭ್ಯ ಘೋಷಿಸಿದ ರಾಜ್ಯ ಸರಕಾರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೊಲೀಸರು ನಡೆಸಿದ್ದ ಪ್ರತಿಭಟನೆಗೆ ನ್ಯಾಯ ದೊರಕುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಪೊಲೀಸ್‍ ಸಿಬ್ಬಂದಿಗೆ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಸರಕಾರ ಮಹತ್ವದ ನಿರ್ಣಯ ಕೈಗೊಂಡಿದೆ.

ಪೊಲೀಸರ ವೇತನ ತಾರತಮ್ಯ ನಿವಾರಣೆಯ ಮೊದಲ ಹಂತವಾಗಿ ಸರಕಾರ ಡಿಸೆಂಬರ್ 1 ರಿಂದ ಜಾರಿಯಾಗುವಂತೆ ಈ ಸೌಲಭ್ಯಗಳನ್ನು ಒದಗಿಸಿದೆ. ಪೊಲೀಸ್ ಸಿಬ್ಬಂದಿಗೆ ಹೊಸದಾಗಿ ಸಿಗುವ ಸೌಲಭ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಘೋಷಿಸಿದರು.

ಸೌಲಭ್ಯಗಳು: ಪ್ರತಿ ತಿಂಗಳು 500 ರು. ಸಮವಸ್ತ್ರ ಭತ್ಯೆ, 1000 ರು. ಕಠಿಣತಾ ಭತ್ಯೆ, 600 ರು. ಅನುಕೂಲಕರ ಭತ್ಯೆ, 10 ವರ್ಷಕ್ಕೊಮ್ಮೆ ಸಿಬ್ಬಂದಿಗೆ ಭಡ್ತಿ ಸೌಲಭ್ಯಗಳನ್ನು ಘೋಷಿಸಲಾಗಿದೆ.

ಈ ಸೌಲಭ್ಯಗಳು ಪೇದೆಗಳಿಂದ ಸಬ್‍ ಇನ್ಸ್‍ ಪೆಕ್ಟರ್ ಹಂತದವರೆಗೆ ಅನ್ವಯ ಆಗಲಿದೆ. ಇದರಿಂದ ಶೇ.90ರಷ್ಟು ಅಂದರೆ 80 ಸಾವಿರ ಸಿಬ್ಬಂದಿಗೆ 2000 ರು. ಭತ್ಯೆ ಹೆಚ್ಚುವರಿಯಾಗಿ ಸಿಗಲಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ 13 ತಿಂಗಳು ವೇತನ ನೀಡುವುದಿಲ್ಲ. ಆದರೆ, ನಮ್ಮಲ್ಲಿ 13 ತಿಂಗಳು ಸಂಬಳ ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಪೊಲೀಸ್ ಸಿಬ್ಬಂದಿಗೆ ಹೊಸದಾಗಿ ಸೌಲಭ್ಯಗಳನ್ನು ನೀಡುವುದರಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 200 ಕೋಟಿ ರು. ಹೊರೆ ಬೀಳುತ್ತದೆ. ಹಗಲು ರಾತ್ರಿಯೆನ್ನದೆ ಪೊಲೀಸರು ದುಡಿಯುತ್ತಾರೆ. ಹಾಗಾಗಿ ಅವರ ಸೇವೆಯನ್ನು ಗಮನಿಸಿ ಈ ಸೌಲಭ್ಯಗಳನ್ನು ಘೋಷಿಸಲಾಗಿದೆ. ಈಗಾಗಲೇ ಅವರಿಗೆ ವಾರದ ರಜೆ ಘೋಷಿಸಲಾಗಿದೆ ಎಂದರು.

Leave a Reply

comments

Related Articles

error: