ಕರ್ನಾಟಕ

ಉತ್ತರ ಕೊಡಗಿನ ಸೂರ್ಲಬ್ಬಿ ನಾಡಿನ ಬಗ್ಗೆ ಮತ್ತಷ್ಟು ಅಧ್ಯಯನವಾಗಬೇಕು: ಕಾಳೇಗೌಡ ನಾಗವಾರ್

ಸೋಮವಾರಪೇಟೆ,ಜ.6-ಜಾನಪದ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ಉತ್ತರ ಕೊಡಗಿನ ಸೂರ್ಲಬ್ಬಿ ನಾಡಿನ ಬಗ್ಗೆ ಇನ್ನಷ್ಟು ಅಧ್ಯಯನ ಆಗಬೇಕಾದ ಅಗತ್ಯತೆ ಇದೆ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕಾಳೇಗೌಡ ನಾಗವಾರ್ ಹೇಳಿದರು.

ಕರ್ನಾಟಕ ಜಾನಪದ ಪರಿಷತ್‍ನ ಕೊಡಗು ಜಿಲ್ಲಾ ಘಟಕ, ಜಿಲ್ಲಾ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಗರ್ವಾಲೆ ಗ್ರಾಮ ಪಂಚಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿ ಸೂರ್ಲಬ್ಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಲ್ಲಿನ ಕಲೆ, ಸಂಸ್ಕೃತಿ, ವಾತಾವರಣ ಹಾಗೂ ಜೀವನ ಪದ್ಧತಿ ಸಂಶೋಧಕರಿಗೆ ಹೆಚ್ಚಿನ ನೆರವು ನೀಡಲಿದೆ. ಇಂದಿನ ಆಧುನಿಕ ಯುಗದಲ್ಲಿ ವಿಷವನ್ನು ಊಟಮಾಡಿ, ವಿಷಜಂತುಗಳಾಗಿರುವ ನಮಗೆ ಇಲ್ಲಿನ ಆಹಾರ ಪದ್ಧತಿಯು ಮುದ ನೀಡುವಂತಿದೆ. ಇಂದಿಗೂ ಈ ಭಾಗದಲ್ಲಿ ಪ್ರಾಚೀನ ಕ್ರೀಡೆಗಳು ಮೂಲ ಸ್ವರೂಪದಲ್ಲಿ ಉಳಿದುಕೊಂಡಿರುವುದು ಶ್ಲಾಘನೀಯ ಎಂದರು.

ಹೆಚ್ಚು ವ್ಶೆಜ್ಞಾನಿಕವಾಗಿ, ಸಾಂಸ್ಕೃತಿಕ ಅಂಶಗಳು ಜಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಸಂಶೋಧನಾ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಅಕ್ಷರ ಜ್ಞಾನ ಪ್ರಾರಂಭವಾಗುವುದಕ್ಕಿಂತ ಮೊದಲು ನಾಡಿನ ಜಾನಪದ ಕಲೆಗಳನ್ನು ಕರಗತ ಮಾಡಿಕೊಂಡು ಬಾಯಿ ಮಾತಿನ ಮೂಲಕ ಜಾನಪದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಹಿರಿಯ ಚೇತನಗಳನ್ನು ಇಂತಹ ಸಂದರ್ಭಗಳಲ್ಲಿ ಗುರುತಿಸುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭ ಹಿರಿಯ ಜಾನಪದ ಕಲಾವಿಧರಾದ ಮುದ್ದಂಡ ತಿಮ್ಮಯ್ಯ, ಪುದಿಯತಂಡ ಪೂವಮ್ಮ, ಉದಿಯಂಡ ಪೊನ್ನಪ್ಪ, ಕಾಕೇರ ಪೊನ್ನಪ್ಪ, ಮುದ್ದಂಡ ಶಿವಯ್ಯ, ಓಡಿಯಂಡ ಬೆಳ್ಳಿಯಪ್ಪ, ನಾಪಂಡ ಪೂವಯ್ಯ, ಗೌಡಂಡ ತಮ್ಮಯ್ಯ, ನಾಳಿಯಮ್ಮಂಡ ಮೇದಮಯ್ಯ ಹಾಗೂ ಜಾನಪದ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಂಚೇಟ್ಟೀರ ಫ್ಯಾನ್ಸಿ ಮುತ್ತಣ್ಣ ಅವರುಗಳನ್ನು ಸನ್ಮಾನಿಸಲಾಯಿತು.

ಕ್ರೀಡಾಕೂಟಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲಿ ಮೆರವಣಿಗೆ ಮೂಲಕ ತೆರಳಿದ ಗ್ರಾಮಸ್ಥರು, ನಾಲ್ಗುಡಿ ದೇವರನ್ನು ಪ್ರಾರ್ಥಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭ ಸಾರ್ವಜನಿಕರಿಗೆ ಗೋಣಿಚೀಲ ಓಟ, ರೆಗ್ಗೆ, ಚಿಲಕಿ ಆಟ, ಮಡಿಕೆ ಒಡೆಯುವುದು, ವಲಿಬಾಲ್, ಮಹಿಳಾ ಕಬಡ್ಡಿ, ತೆಂಗೆಪೋರ್ ಸೇರಿದಂತೆ ವಿವಿಧ ಕ್ರೀಡಾಸ್ಫರ್ಧೆಗಳು ನಡೆದವು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಾನಪದ ಪರಿಷತ್‍ನ ಜಿಲ್ಲಾಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಜಯಲಕ್ಷ್ಮೀ ಸುರೇಶ್, ನಾಡು ತಕ್ಕರಾದ ಮೇದುರ ಪೂವಯ್ಯ, ಸೂರ್ಲಬ್ಬಿ ನಾಡು ಅಧ್ಯಕ್ಷರಾದ ಮುದ್ದಂಡ ತಿಮ್ಮಯ್ಯ, ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕನ್ನಿಕಂಡ ಸುಭಾಶ್, ಉಪಾಧ್ಯಕ್ಷ ಚಾಮೇರ ಪಳಂಗಪ್ಪ, ಸದಸ್ಯೆ ಮಾಯಮ್ಮ, ಕೊಡವ ಟ್ರಸ್ಟ್ ಅಧ್ಯಕ್ಷ ಅಜ್ಜಿನಂಡ ತಮ್ಮು ಪೂವಯ್ಯ, ಹಿರಿಯರಾದ ಅಂಬೆಕಲ್ ಕುಶಾಲಪ್ಪ ಉಪಸ್ಥಿತರಿದ್ದರು. (ವರದಿ-ಕೆಸಿಐ, ಎಂ.ಎನ್)

 

 

Leave a Reply

comments

Related Articles

error: