ಪ್ರಮುಖ ಸುದ್ದಿಮೈಸೂರು

ದೀಪಕ್ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡ ? ಹೊಸ ಬಾಂಬ್ ಸಿಡಿಸಿದ ಎಚ್.ಡಿ. ಕುಮಾರಸ್ವಾಮಿ

ಮೈಸೂರು, ಜ 8:- ದಕ್ಷಿಣ ಕನ್ನಡದ ದೀಪಕ್ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ ಎಂದು ಹೇಳುವ ಮೂಲಕ  ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ದೀಪಕ್ ರಾವ್ ಕೊಲೆಗೆ ಕೆಲವು ಬಿಜೆಪಿ ನಾಯಕರು ಕಾರಣಕರ್ತರಾಗಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ. ಇದೂವರೆಗೂ ನಾನು ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ, ಇಂದು ನೀವೆಲ್ಲಾ ಕೇಳುತ್ತಿರುವುದಕ್ಕೆ ನಾನು ಉತ್ತರಿಸುತ್ತಿದ್ದೇನೆ. ದೀಪಕ್ ರಾವ್ ಕೊಲೆ ನಡೆದಾಗ ದುಷ್ಕರ್ಮಿಗಳ ಮೇಲೆ ಮುಸ್ಲಿಂ ಬಾಂಧವರು ಹಲ್ಲೆ ಮಾಡಿ ಕಾಪಾಡುವ ಪ್ರಯತ್ನ ಮಾಡಿದ್ದಾರೆ. ಆ ಮುಸ್ಲಿಂ ಬಾಂಧವರ ಹಿನ್ನೆಲೆಯಲ್ಲಿಯೇ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಆದರೆ ಆ ನಾಲ್ಕು ಜನಕ್ಕೆ ಸುಪಾರಿ ಕೊಟ್ಟಿದ್ದವರು ಯಾರೆಂಬುದನ್ನು ಸರ್ಕಾರಕ್ಕೆ ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ದೀಪಕ್ ರಾವ್ ಕೊಲೆಯ ಮೂಲ ವ್ಯಕ್ತಿಗಳು ಯಾರೆಂಬುದನ್ನು ಇನ್ನು ಬಹಿರಂಗೊಳಿಸಿಲ್ಲ ಯಾಕೆ? ಕೊಲೆ ನಡೆದು ಇಷ್ಟು ದಿನಗಳಾದರೂ ಸರ್ಕಾರ ಮಾಹಿತಿಯನ್ನು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿದೆ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದೂವರೆಗೂ ಸತ್ಯಾಂಶವನ್ನು ತಿಳಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಎಚ್ ಡಿ ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೀಪಕ್ ರಾವ್ ಕೊಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ. ನಾನು ಪ್ರಕರಣ ಸಂಬಂಧ ಕೆಲವು ಮಾಹಿತಿಗಳನ್ನು ಪಡೆದಿದ್ದೇನೆ. ಈ ಎಲ್ಲ ಮಾಹಿತಿಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಸತ್ಯ ಹೇಳಿದ್ದರೂ, ಸರ್ಕಾರ ಮಾತ್ರ ಮೌನವಹಿಸಿರುವುದು ಯಾಕೆ ಎಂದು ಹೆಚ್.ಡಿ.ಕೆ ಪ್ರಶ್ನಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: