ಮೈಸೂರು

ಸದಾಶಿವ ಆಯೋಗದ ವರದಿಯನ್ನು ಆದಷ್ಟು ಬೇಗನೆ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಎನ್.ಮಹೇಶ್ ಕರೆ

ಮೈಸೂರು,ಜ.9:- ಭಾರತೀಯರೆಲ್ಲರಿಗೂ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಗಳನ್ನು ದೊರಕಿಸಿಕೊಡುವಂತೆ ಭಾರತದ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎನ್.ಮಹೇಶ್ ತಿಳಿಸಿದರು.

ಮಂಗಳವಾರ ಬೆಳಿಗ್ಗೆ ರೋಟರಿ ಸಭಾಂಗಣದಲ್ಲಿ ನ್ಯಾ. ಎ.ಜೆ. ಸದಾಶಿವ ಆಯೋಗ ಹೋರಾಟ ಕುರಿತ ವಿಚಾರ ಸಂಕಿರಣವನ್ನು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಮರ್ಪಿಸುವುದರ ಮೂಲಕ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ದೇಶದಲ್ಲಿ ಇಂದು 130 ಕೋಟಿ ಜನಸಂಖ್ಯೆ ಇದೆ. ಅವರೆಲ್ಲರಿಗೂ ನ್ಯಾಯ, ಸ್ವಾತಂತ್ರ್ಯ, ಹಾಗೂ ಸಮಾನತೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯ. ಈ ಮೂರು ಅಂಶಗಳನ್ನು ನೀಡಿದ್ದೇ ಆದರೆ ಪರಸ್ಪರ ಜನರಲ್ಲಿ ಸಹೋದರತ್ವ ಬೆಳೆಯಲಿದೆ ಎಂದರು. ರಾಷ್ಟ್ರದ ಜನಸಂಖ್ಯೆ ಎಷ್ಟೇ ಇರಲಿ ಅದರಲ್ಲಿ ತಮ್ಮ ಪಾಲಿನ ಸವಲತ್ತುಗಳನ್ನು ಪಡೆದುಕೊಳ್ಳುವುದು ಅವರ ಹಕ್ಕು. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಲ್ಲಿ ಒಳ ಮೀಸಲಾತಿ ತರುವ ದಿಸೆಯಲ್ಲಿ ನ್ಯಾ. ಸದಾಶಿವ ಆಯೋಗವು ರಚಿಸಿರುವ ವರದಿಯು ಬಹಳ ಪ್ರಾಮುಖ್ಯತೆ ಪಡೆದಿದೆ. ಆದರೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ವರದಿಯನ್ನು ತಿರುಚಿರುವುದು ಭಾರತದ ಮೂಲ ನಿವಾಸಿಗಳಿಗೆ ಅನ್ಯಾಯವೆಸಗಿದಂತಾಗಿದೆ. ಇವರುಗಳು ತಮ್ಮ ಸವಲತ್ತುಗಳಿಗಾಗಿ ಕೈಚಾಚುತ್ತಿರುವುದು ಶೋಚನೀಯ ಸಂಗತಿ. ಎಡಗೈ ಹಾಗೂ ಬಲಗೈ ಪಂಥದವರಿಗೆ ಇದು ಮಾರಕವಾಗಿ ಪರಿಣಮಿಸಿದೆ. ಆದ ಕಾರಣ ಈ ಎರಡು ಪಂಥದವರು ಸಂಘಟಿತರಾಗಿ ಸದಾಶಿವ ಆಯೋಗದ ವರದಿಯನ್ನು ಆದಷ್ಟು ಬೇಗನೆ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ದೊರೈರಾಜ್, ಅಖಿಲ ಕರ್ನಾಟಕ ಛಲವಾದಿ ಮಹಾಸಭಾಧ್ಯಕ್ಷ ಕುಮಾರ್, ನಿವೃತ್ತ ಪ್ರಾಧ್ಯಾಪಕ ಪ್ರೊ.ನಟರಾಜ್ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: