ಮೈಸೂರು

ಟಿವಿ, ಮೊಬೈಲ್ ಹಾವಳಿಯಿಂದ ಕಾದಂಬರಿಗಳು ನಶಿಸಿಹೋಗುತ್ತಿವೆ: ಮ.ವಿ.ರಾಮಪ್ರಸಾದ್

ಗ್ರಂಥಾಲಯದ ಸ್ನೇಹ ಮಾಡಿದರೆ ನಮ್ಮ ಜ್ಞಾನ ವೃದ್ಧಿಯಾಗುವುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ್ ಅಭಿಪ್ರಾಯಪಟ್ಟರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಚಾಮುಂಡಿಪುರಂ ಶಾಖೆಯಲ್ಲಿ ಶುಕ್ರವಾರ ನಡೆದ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – 2016’ ಪ್ರಯುಕ್ತ ಆಯೋಜಿಸಿದ್ದ ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2015ರ ವರ್ಷ ಅವಿಸ್ಮರಣೀಯ ವರ್ಷ. ಏಕೆಂದರೆ ಈ ವರ್ಷ ಹಲವಾರು ಶತಮಾನೋತ್ಸವಕ್ಕೆ ಕಾರಣವಾಗಿದೆ. ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಗ್ರಂಥಾಲಯ ಹಾಗೂ ದೇಜಗೌ ಹೀಗೆ ಹಲವಾರು ಶತಮಾನೋತ್ಸವವು ಒಂದೇ ವರ್ಷ ಜರುಗಿರುವುದು ಹೆಮ್ಮೆ ತರುವ ವಿಷಯ. ಗ್ರಂಥಾಲಯಗಳು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ. ಅದರ ಉಪಯೋಗ ಪಡೆಯುವುದರ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಗ್ರಂಥಾಲಯಕ್ಕೆ ಗಣಕಯಂತ್ರದ ಅವಶ್ಯಕತೆ ಇದೆ. ಅದನ್ನು ಆದಷ್ಟು ಬೇಗ ಅಳವಡಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲು ಶ್ರಮಿಸುತ್ತೇನೆ ಹಾಗೂ ಶೌಚಾಲಯವನ್ನು ಆದಷ್ಟು ಬೇಗ ನಿರ್ಮಿಸಿ ಅದರ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಇಂದು ಟಿವಿ, ಮೊಬೈಲ್ ಹಾವಳಿಯಿಂದಾಗಿ ಕಾದಂಬರಿಗಳು ನಶಿಸಿಹೋಗುತ್ತಿವೆ. ಮಹಿಳೆಯರಿಗೂ ಅದರ ಬಗ್ಗೆ ಆಸಕ್ತಿ ಕಡಿಮೆಯಾಗಿ ಟಿವಿ ಧಾರಾವಾಹಿಗಳಿಗೆ ದಾಸರಾಗಿದ್ದಾರೆ. ಉಷಾನವರತ್ನರಾಂ, ವಾಣಿ, ಸಿ.ಎನ್. ಮುಕ್ತ, ಅನುಪಮ ನಿರಂಜನ ಮುಂತಾದ ಕಾದಂಬರಿಗಳು ಇಂದಿಗೂ ಜನಪ್ರಿಯವಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ನಿಮ್ಮ ಮಕ್ಕಳನ್ನು ಅವರ ಪಠ್ಯದ ಜೊತೆಗೆ ಬೇರೆ ಬೇರೆ ಕ್ಷೇತ್ರಗಳ ಬಗ್ಗೆ (ಯೋಗ, ಕ್ರೀಡೆ, ಸಂಗೀತ, ಸಾಹಿತ್ಯ ಇತ್ಯಾದಿ) ಮಾಹಿತಿ ಪಡೆಯಲು ಗ್ರಂಥಾಲಯಕ್ಕೆ ಕರೆದುಕೊಂಡು ಬನ್ನಿ. ಇಂದು ನಾವು ಜಾಗತೀಕರಣದ ಹಂತದಲ್ಲಿದ್ದೇವೆ. ನಾವು ಎಲ್ಲ ಕ್ಷೇತ್ರದಲ್ಲೂ ಪಾಶ್ಚಿಮಾತ್ಯ ದೇಶಗಳನ್ನು ಮಣಿಸುವ ದಿಕ್ಕಿನಲ್ಲಿದ್ದೇವೆ. ಗ್ರಂಥಾಲಯದಲ್ಲಿ ನಾವು ಅನೇಕ ಲೇಖಕರು, ಸಾಹಿತಿಗಳು ಕೊಟ್ಟ ಅತ್ಯಮೂಲ್ಯ ಕೊಡುಗೆಗಳನ್ನು ಮೈಗೂಡಿಸಿಕೊಳ್ಳಬೇಕಿದೆ  ಎಂದು ಕರೆಯಿತ್ತರು. ನಗರಪಾಲಿಕೆ ಸದಸ್ಯರಾಗಿ ಮಾನವೀಯ ಮೌಲ್ಯಗಳನ್ನು ಹೊಂದಿರುವ ಮ.ವಿ.ರಾಮಪ್ರಸಾದ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ. ಮಂಜುನಾಥ್, 6ನೇ ವಾರ್ಡಿನ ಅಧ್ಯಕ್ಷರಾದ ಸಂದೀಪ್, ಮುಖಂಡರಾದ ಮಂಜುನಾಥ್, ವಿಕ್ರಮ್, ಕಶ್ಯಪ್, ದರ್ಮೇಂದ್ರ, ಶಿವಲಿಂಗಾಚಾರ್ ಮುಂತಾದವರು ಭಾಗವಹಿಸಿದ್ದರು.

Leave a Reply

comments

Related Articles

error: