ಕರ್ನಾಟಕ

ಎರಡನೇ ದಿನವೂ ಚುರುಕಿನಿಂದಲೇ ಸಾಗಿದ ಹುಲಿ ಗಣತಿ ಕಾರ್ಯ

ರಾಜ್ಯ(ಚಾಮರಾಜನಗರ)ಜ.9:- ಎರಡನೇ ದಿನವೂ ಹುಲಿ ಗಣತಿ ಕಾರ್ಯ ಚುರುಕಿನಿಂದಲೇ ಸಾಗಿದೆ.

ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿನ್ನೆಯಿಂದ ಆರಂಭವಾದ ಹುಲಿ ಗಣತಿ ಕಾರ್ಯ ಎರಡನೇ ದಿನವಾದ ಇಂದೂ ಸಹಾ ಮುಂದುವರೆಯಿತು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈಗಾಗಲೇ ಸರಿ ಸುಮಾರು 138 ಹುಲಿಗಳಿದ್ದು, ರಾಷ್ಟ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹುಲಿಗಳ ಗಣತಿ ಕಾರ್ಯದಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲಿರುವ ಸಾಧ್ಯತೆಗಳಿವೆ. ಈಗಾಗಲೇ ನಿನ್ನೆಯಿಂದ ಅರಣ್ಯ ಸಿಬ್ಬಂದಿಗಳು ಹಾಗೂ ತರಬೇತಿ ಪಡೆದ ಸ್ವಯಂ ಸೇವಕರು ಅರಣ್ಯದೊಳಗೆ ಹುಲಿಗಳ ಏಣಿಕೆ ಕಾರ್ಯಕ್ಕೆ ಮುಂದಾಗಿ, ಹುಲಿ ಹೆಜ್ಜೆ, ಮೂತ್ರ ಸೇರಿದಂತೆ  ಹಲವು ರೀತಿಯಲ್ಲಿ ಏಣಿಕೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ವಲಯ, ಜೆ.ಎಸ್.ಬೆಟ್ಟ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಹುಲಿಗಳ ತಾಣವಾಗಿದ್ದರಿಂದ ಅರಣ್ಯ ಸಿಬ್ಬಂದಿಗಳು ನುರಿತ ತರಬೇತಿದಾರರೊಂದಿಗೆ ಕಾನನದೊಳಗೆ ಹೋಗಿ ಗಣತಿ ಕಾರ್ಯದಲ್ಲಿ ಮುಂದಾಗಿದ್ದಾರೆ. ಗಣತಿದಾರರಿಗೆ ಹುಲಿ ಹೆಜ್ಜೆ ಗುರುತುಗಳು ಹೇರಳವಾಗಿ ದೊರೆತಿದ್ದು, ಅದನ್ನು ಮೊಬೈಲ್ ಆಪ್ ಮೂಲಕ ನವದೆಹಲಿಯಲ್ಲಿರುವ ಮುಖ್ಯ ಸರ್ವರ್‍ಗೆ ರವಾನೆ ಮಾಡಲಾಗುತ್ತಿದೆ. ಕೆಲವು ಬೀಟ್‍ಗಳಲ್ಲಿ ಹುಲಿಗಳು ಕಾಣಿಸಿಕೊಂಡಿದ್ದು, ಇದನ್ನು ಕಂಡ ಗಣತಿದಾರರು ಪುಳಕಿತರಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿಗಳ ಗಣತಿ ಕಾರ್ಯವು ಸುಲಲಿತವಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆಯಸಿಬ್ಬಂದಿಗಳ ಮಾರ್ಗದರ್ಶನದೊಂದಿಗೆ ಬಹಳ ಎಚ್ಚರಿಕೆಯಿಂದ ಹುಲಿ ಗಣತಿ ಕಾರ್ಯ ನಡೆಯುತ್ತಿದೆ. ಗಣತಿದಾರರಿಗೆ ಹುಲಿ, ಕಾಡುನಾಯಿ, ಚಿರತೆ, ಜಿಂಕೆ ಆನೆ ಮುಂತಾದ ವನ್ಯ ಪ್ರಾಣಿಗಳು ಕಂಡಿವೆ. ಈ ಭಾರಿಯೂ ಸಹ ಬಂಡೀಪುರ ಅಭಯಾರಣ್ಯದಲ್ಲಿ ಹುಲಿಗಳ ಸಂತತಿ ಹೆಚ್ಚಾಗಲಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: