ಮೈಸೂರು

ಸೂಫಿ ಕುರಿತಾಗಿ ಆಳವಾದ ಅಧ್ಯಯನಗಳು ನಡೆದಿಲ್ಲ: ಡಾ.ಮಳಲಿ ವಸಂತಕುಮಾರ್

“ಸಾಂಸ್ಕೃತಿಕ ನಗರಿ ಎಂದೇ ಹೆಸರು ಪಡೆದಿರುವ ಮೈಸೂರಿನಲ್ಲಿ ಸೂಫಿ ಸಂತರ ಕುರಿತಾದ ಚಿಂತನೆಗಳ ಮಂಥನವಾಗದೇ ಹೋದದ್ದು ಬೇಸರದ ಸಂಗತಿ” ಎಂದು ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಅಭಿಪ್ರಾಯಪಟ್ಟರು.

ಕಲಾಮಂದಿರದ ಮನೆಯಂಗಳದಲ್ಲಿ ಪ್ರೊ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ತು ಹಾಗೂ ಕರ್ನಾಟಕ ವಿಚಾರ ವೇದಿಕೆಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ಸೂಫಿ ಸಂಸ್ಕೃತಿ: ಎಲ್ಲಿ, ಏಕೆ, ಹೇಗೆ ಹಾಗೂ ಎಂತು’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸೂಫಿ ಎಂದರೆ ಲೋಕಾನುಭವಿ, ಅನುಭಾವಿ, ವಿಭೂತಿ ಪುರುಷ, ಋಷಿ ಪ್ರಜ್ಞೆ ಎಂದರ್ಥ. ಅದು ವಿಶಿಷ್ಟವೂ ಹೌದು. ವಿಚಿತ್ರವೂ ಹೌದು. ಆದರೆ ಮಾಧ್ಯಮ ಕ್ಷೇತ್ರದಲ್ಲಾಗಲೀ, ವಿಶ್ವವಿದ್ಯಾನಿಲಯಗಳಲ್ಲಾಗಲೀ ಸೂಫಿ ಕುರಿತಾದ ಆಳವಾದ ಅಧ್ಯಯನಗಳು ನಡೆದೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಇಸ್ಲಾಂನ ಆಧ್ಯಾತ್ಮಿಕ ಧರ್ಮ ಸ್ವರೂಪ ಸೂಫಿ. ರಾಜತ್ವದ ವಿರೋಧಿಗಳು ಸೂಫಿಗಳು. ಮೂಲಭೂತ ಇಸ್ಲಾಮಿಗರು ಸೂಫಿ ಪಂಥವನ್ನು ವಿರೋಧಿಸುತ್ತಾರೆ. ಧಾರ್ಮಿಕ ಭಾವೈಕ್ಯತೆ ಹುಟ್ಟುಹಾಕಿದ, ಮನುಜ ಧರ್ಮ ಹಾಗೂ ಪ್ರೀತಿಯ ಆಧಾರದ ಜಂಗಮ ಸಂಸ್ಕೃತಿಯನ್ನು ಅನುಸರಿಸಿ ಬಂದವರು ಸೂಫಿಗಳು. ಅಲ್ಲಿ ಪವಾಡಗಳನ್ನು ವಿರೋಧಿಸಿದ್ದೂ ಉಂಟು. ಪವಾಡಗಳನ್ನು ಮಾಡಿದವರೂ ಉಂಟು. ಹಿಂದೂ ಧರ್ಮದಿಂದ ಸೂಫಿ ಸಂಸ್ಕೃತಿ ಪಡೆದುಕೊಂಡಿತೇ ಅಥವಾ ಸೂಫಿ ಸಂಸ್ಕೃತಿಯಿಂದ ಹಿಂದೂ ಧರ್ಮ ಪಡೆದುಕೊಂಡಿತೇ ಎಂಬುದು ಜಿಜ್ಞಾಸೆಯಾಗಿಯೇ ಉಳಿದಿದೆ. ಕೇಶವ ಚೈತನ್ಯ ಹಾಗೂ ರಾಘವ ಚೈತನ್ಯರು ಸೂಫಿಗಳ ಶಿಷ್ಯರಾಗಿದ್ದರು ಎಂದು ಸ್ಮರಿಸಿದರು.

ಪ್ರೊ.ಶಬ್ಬೀರ್ ಮುಸ್ತಾಫ ಮಾತನಾಡಿ, ಕಳೆದ 30 ವರ್ಷಗಳಿಂದೀಚೆಗೆ ಧರ್ಮವೆಂಬುದು ಜನಾಂಗವನ್ನು ವಿಭಾಗಿಸುವ ಸಾಧನವಾಗಿದೆ. ಇಸ್ಲಾಂನ ಸಾತ್ವಿಕ ಸ್ವರೂಪ ಸೂಫಿ. ಮನಃಶಾಸ್ತ್ರದಲ್ಲಿ ಧರ್ಮವೆಂಬುದು ವಿಶೇಷ ಪ್ರಜ್ಞೆ, ಅದರಲ್ಲೂ ಸೂಫಿ ಎಂಬುದು ಇನ್ನೂ ಶ್ರೇಷ್ಠ ಪ್ರಜ್ಞೆ ಎಂದು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಬಿ.ಶೇಕ್ ಅಲಿ, ಡಾ.ಡಿ.ತಿಮ್ಮಯ್ಯ, ಚಿಂತಕ ನೀಲಕಂಠನಹಳಗಳ್ಳಿ  ತಮ್ಮಣ್ಣಗೌಡ, ಪ್ರಾಂಶುಪಾಲ ಹಿರಿಮರಳಿ ಧರ್ಮರಾಜು, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಪ್ರೊ.ಬೆಸೂರು ಮೋಹನ ಪಾಳೇಗಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: