ಮೈಸೂರು

ಧರ್ಮಗಳು ಮತ್ತು ಜಾತಿ ಪದ್ಧತಿ ಮನುಷ್ಯ ನಿರ್ಮಿತ, ಅವುಗಳನ್ನು ತೊಡೆದುಹಾಕಿ ಒಂದಾಗಿ ಬಾಳಬೇಕು :ಪ್ರೊ.ಕಾಳೇಗೌಡ ನಾಗವಾರ

ಮೈಸೂರು,ಜ.10:- ಧರ್ಮಗಳು ಮತ್ತು ಜಾತಿ ಪದ್ಧತಿಯನ್ನು ಮನುಷ್ಯನೇ ನಿರ್ಮಿಸಿದ್ದು ಅವುಗಳನ್ನು ತೊಡೆದುಹಾಕಿ ನಾವೆಲ್ಲರೂ ಒಂದಾಗಿ ಬಾಳಬೇಕು ಎಂದು ಸಂಸ್ಕೃತಿ ಚಿಂತಕ ಹಾಗೂ ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.

ಪಿರಿಯಾಪಟ್ಟಣ ತಾಲೂಕು ದಸಂಸ ಘಟಕದ ವತಿಯಿಂದ ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಮಹದೇಶ್ವರ ಬಡಾವಣೆಯಲ್ಲಿ ಆಯೋಜಿಸಿದ್ದ ವಿಶ್ವಮಾನವ ಕುವೆಂಪು ಜಯಂತಿ ಅಂಗವಾಗಿ ಸರ್ವಧರ್ಮೀಯರ ಸಹಪಂಕ್ತಿ ಭೋಜನ ದಲಿತ ವಿದ್ಯಾರ್ಥಿಗಳು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರಾಗಿ ಪಾಲ್ಗೊಂಡು ಮಾತನಾಡಿದರು. ಡಾ.ಅಂಬೇಡ್ಕರ್, ಕುವೆಂಪು ಮತ್ತು ರಾಮಮನೋಹರ ಲೋಹಿಯಾರವರು ಜನತೆ ಮತ್ತು ಜನ ಭಾಷೆಗಳಿಗೆ ಬದ್ಧರಾಗಿದ್ದ ಮಹಾಪುರುಷರಾಗಿದ್ದರು. ಇತ್ತೀಚಿನ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶ್ರಮಜೀವಿಯ ರಕ್ತ ಹೀರುವ ಜಿಗಣೆಗಳಂತಾಗಿದ್ದಾರೆ. ಜಾತಿಪದ್ಧತಿ ಮತ್ತು ಗುರುಪರಂಪರೆಯಿಂದ ಹೊರತಾಗದಿರುವುದು ಆತಂಕಕಾರಿಯಾದ ವಿಷಯವಾಗಿದ್ದು ಅಸ್ಪೃಶ್ಯತೆ ಆಚರಣೆ ಇಂದಿಗೂ ಜೀವಂತವಾಗಿರುವುದು ವಿಷಾದಕರವಾಗಿದೆ ಎಂದರು. ಅಂಬೇಡ್ಕರ್ ಹಾಗೂ ಕುವೆಂಪುರವರ ವಿಚಾರಧಾರೆಗಳನ್ನು ಇಂದಿನ ಯುವ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ ಎಂದರು.

ಧರ್ಮಗುರುಗಳಾದ ರಾವಂದೂರಿನ ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ, ಭಾರತ್‍ಮಾತಾ ಕೊಪ್ಪ ವಿದ್ಯಾಸಂಸ್ಥೆಯ ಫಾ. ಪಿ.ಜೆ ಜೋಸ್, ಖತೀಬರಾದ ಅಬ್ದುಲ್ ಮಜೀದ್, ಪರಿಸರವಾದಿ ಕೆ.ಎನ್ ಸೋಮಶೇಖರ್, ಪುರಸಭಾ ಅಧ್ಯಕ್ಷ ವೇಣುಗೋಪಾಲ್, ಭಾರತಬಂಧು ಪತ್ರಿಕೆಯ ಸಂಪಾದಕ ಬಿ.ಕೆ ಸುಂದರೇಶ್, ದಸಂಸ ಸಂಚಾಲಕ ಅಣ್ಣಯ್ಯ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: