ಕರ್ನಾಟಕಪ್ರಮುಖ ಸುದ್ದಿಮೈಸೂರು

ಹಳೆಯ ಯೋಜನೆಗಳಿಗೆ ಭಾಗ್ಯ ಸೇರಿಸಿದ್ದಾರೆ ಅಷ್ಟೇ : ಮಾಜಿ ಸಂಸದ ವಿಶ್ವನಾಥ್ ವ್ಯಂಗ್ಯ

ನವ ಕರ್ನಾಟಕ ಯಾತ್ರೆ ನೆಪದಲ್ಲಿ ಕಾಂಗ್ರೆಸ್ ಪ್ರಚಾರ : ದೂರು

ಮೈಸೂರು, ಜ. 10 : ನವ ಕರ್ನಾಟಕ ಯಾತ್ರೆ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಪ್ರಚಾರ ನಡೆಸುತ್ತಿದ್ದು, ಅಧಿಕಾರ ದುರುಪಯೋಗದ ಮೂಲಕ ಸರ್ಕಾರದ ಬೊಕ್ಕಸವನ್ನು ದಿವಾಳಿ ಮಾಡುತ್ತಿದ್ದಾರೆ, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ ಎಂದು ಮಾಜಿ ಸಂಸದ ಜೆಡಿಎಸ್ ಮುಖಂಡ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನವಕರ್ನಾಟಕ ಯಾತ್ರೆ ನೆಪದಲ್ಲಿ  ಸರ್ಕಾರದ ಖರ್ಚಿನಲ್ಲಿ ಸಭೆಗಳನ್ನು ನಡೆಸಿ ಇಂತವರಿಗೇ ಮತ ಹಾಕಿ, ಇಂತಹವರನ್ನು ಸೋಲಿಸಿ ಎಂದು, ಅಧಿಕಾರದ ದರ್ಪದೊಂದಿಗೆ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಎಲ್ಲಿದೆ? ಎಲ್ಲಾ ರೀತಿಯಲ್ಲೂ ದುಂದು ವೆಚ್ಚ ನಡೆಯುತ್ತಿದ್ದು ಸರ್ಕಾರ ದಿವಾಳಿಯಾಗಿದೆ ಎಂದು ನವಕರ್ನಾಟಕ ಯಾತ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಭಾಗ್ಯ ಸೇರಿಸಿದ್ದಾರೆ ಅಷ್ಟೇ : ಮಗು ಭಾಗ್ಯವೊಂದು ಬಿಟ್ಟು ಉಳಿದಂತೆ ಎಲ್ಲಾ ಭಾಗ್ಯಗಳನ್ನು ನೀಡಿದ್ದಾರೆ ಹಾಸ್ಯಾಸ್ಪದವಾಗಿ ಮಾತನಾಡಿ, ಹಿಂದಿನ ಸರ್ಕಾರಗಳ ಯೋಜನೆಗಳಿಗೆ ಭಾಗ್ಯ ಸೇರಿಸಿ ತಮ್ಮ ಯೋಜನೆಗಳೆಂದು ಹೇಳುತ್ತಿದ್ದೀರೇ ಹೊರತು, ಈ ನಾಲ್ಕು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ನೀಡಿದ ಸ್ವಂತ ಯೋಜನೆ ಯಾವುದೆಂದು ಜನತೆ ತಿಳಿಸಿ ಎಂದು ಸವಾಲೆಸೆದರು.

ಪ್ರಚಾರದ ಸರ್ಕಾರ : ನವಕರ್ನಾಟಕ ಪ್ರಚಾರಕ್ಕಾಗಿ 1300 ಕೋಟಿ ಹಣವನ್ನು ಕೇವಲ ಜಾಹೀರಾತಿಗಾಗಿ ಬಳಕೆಯಾಗಿದ್ದು, ರಾಜ್ಯ ಸರ್ಕಾರ ಜಾಹೀರಾತು ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿ, ಮುಖ್ಯ ಮಂತ್ರಿಗಳ ಕಚೇರಿಯಲ್ಲಿ 465 ಜನ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಅಥವಾ ಜನಸಾಮಾನ್ಯ ನಿಮ್ಮ ಕಚೇರಿಗೆ ಪತ್ರ ಬರೆದ್ರೆ ಉತ್ತರ ಕೊಡುವುದಿಲ್ಲವೆಂದು ಆಡಳಿತ ಯಂತ್ರದ ಬೇಜವಾಬ್ದಾರಿಯನ್ನು ತೆಗಳಿ. ನವಕರ್ನಾಟಕ ನಿರ್ಮಾಣ ಬರೀ ಪೇಪರ್ ನಲ್ಲಿ ಅಷ್ಟೇ ಎಂದು ವ್ಯಂಗ್ಯವಾಡಿದರು.

ಮೈಸೂರಿಗೆ ನಿಮ್ಮ ಅನುದಾನವೇನು ಎಂದು ಪ್ರಶ್ನಿಸಿ? ಎಲಿಕ್ಯಾಪ್ಟರ್ ನಲ್ಲಿ ಬರೋದು ಮರಿಗೌಡ, ಮರಿಸ್ವಾಮಿ ಜೊತೆ ಮಾತಾಡುತ್ತಾರೆ ಹೋಗೋದು ಇಷ್ಟೇ ಆಯ್ತು . ಈ ಬಗ್ಗೆ ಜನರು ಯಾಕೆ ಮೌನವಹಿಸಿದ್ದರು ತಿಳಿಯುತ್ತಿಲ್ಲ ಎಂದ ಅವರು . ನವಕರ್ನಾಟಕ ದ ಹೆಸರಿನಲ್ಲಿ ಸರ್ಕಾರವನ್ನು ದಿವಾಳಿ ಮಾಡುತ್ತಿದ್ದಾರೆ, ಇದುವರೆಗೂ ಒಂದು ಎಕರೆ ಭೂಮಿಗೆ ನೀರು ಕೊಟ್ಟಿಲ್ಲ. ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಬಣ್ಣಿಸುತ್ತೀರಾ, ಆದರೆ ಪೋಲಿಸ್ ಇಲಾಖೆ. ತಹಸೀಲ್ದಾರ್ , ಮುಡಾ, ಆರ್ ಟಿ ಓ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಹಾಗಾದರೆ ಇಲಾಖೆಗಳು ಸರ್ಕಾರದ ನಿಯಂತ್ರಣದಲ್ಲಿ ಇಲ್ವಾ? ಎಂದು ಪ್ರಶ್ನಿಸಿದರು.

ದ್ವೇಷದ ರಾಜಕಾರಣ : ಶಾಸಕ ಕೆ.ವೆಂಕಟೇಶ್ ಬಿಡಿಎ ಅಧ್ಯಕ್ಷರಾದ ಮೇಲೆ  ನನ್ನ ಮೇಲಿನ ದ್ವೇಷದಿಂದ ನನ್ನ ಅಳಿಯನನ್ನು ಬಿಡಿಎ ಇಂದ ವರ್ಗಾವಣೆ ಮಾಡಿ ದ್ವೇಷದ ರಾಜಕಾರಣ ನಡೆಸಿದ್ದಾರೆ. ಇದು ಇನ್ನೇಷ್ಟು ದಿನ ಎಂದು ಕಾದು ನೋಡುವೆ ಎಂದು ಮಾರ್ಮಿಕವಾಗಿ ನುಡಿದರು.

ಹಣ ನೀಡಿ ನಡೆಸುವ ಸೀ ಓಟರ್ ಸಮೀಕ್ಷೆಗಳಲ್ಲಿ ಮಾತ್ರ ಕಾಂಗ್ರೆಸ್ ಪರವಾಗಿದೆ. ಹಣಕ್ಕಾಗಿ ನಡೆಯುವ ಸಮೀಕ್ಷೆಯು ಸರ್ಕಾರದ ಪರವಾಗಿದೆ ಹೊರತು ಚುನಾವಣೆಯಲ್ಲಿ  ಜನರ ನಿರ್ಣಯ ಭಿನ್ನವಾಗಿದೆ,  ನಾಳೆಯಿಂದ ಮೈಸೂರಿನಲ್ಲಿ ನಡೆಯುವ ನಿಮ್ಮ ನವಕರ್ನಾಟಕ ಪ್ರಚಾರ ಯಾತ್ರೆಯಲ್ಲಿ ರೋಷವೇಷದ ಭಾಷಣಕ್ಕೆ ಕಡಿವಾಣ ಹಾಕಿ, ಸರ್ಕಾರದ ಸಾಧನೆ ಬಿಂಬಿಸಿ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಕೆ.ಟಿ.ಚಲುವೇಗೌಡ, ಪಾಲಿಕೆ ಮಾಜಿ ಸದಸ್ಯ ಸೋಮಸುಂದರ್, ಜೆಡಿಎಸ್ ನಗರಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಚನ್ನಬಸವಯ್ಯ ಗೋಷ್ಠಿಯಲ್ಲಿ ಸಾಥ್ ನೀಡಿದರು. (ವರದಿ : ಕೆ.ಎಂ.ಆರ್)

 

 

Leave a Reply

comments

Related Articles

error: