ಕರ್ನಾಟಕ

ಜ..12 : ಮಡಿಕೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ

ರಾಜ್ಯ(ಮಡಿಕೇರಿ) ಜ.10 :- ಭಾರತೀಯ ಧರ್ಮ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ ವಿಶ್ವದ ಗಮನ ಸೆಳೆದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಜನವರಿ 12 ರಂದು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಯಮುನಾ ಚಂಗಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2 ಗಂಟೆಗೆ ನಗರ ಬಿಜೆಪಿ ಮಹಿಳಾ ಮೋರ್ಚಾ ಸಹಕಾರದೊಂದಿಗೆ ಇಲ್ಲಿನ ಚೌಕಿ ಬಳಿಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಮೆರವಣಿಗೆ ನಡೆಸಿ, ಬಿಜೆಪಿ ಕಛೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಗುವುದೆಂದರು. ಯುವ ಸಮೂಹವನ್ನು ಜಾಗೃತರನ್ನಾಗಿಸುವ ಮೂಲಕ ರಾಷ್ಟ್ರದ ಅಭ್ಯುದಯಕ್ಕೆ ಮಾರ್ಗವನ್ನು ಸೂಚಿಸಿದ್ದ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನಾ ಸಮಾವೇಶದಲ್ಲಿ ಕೋಟಿ ಕೋಟಿ ಅನುದಾನದ ಮಾತುಗಳನ್ನಾಡಿದ್ದಾರೆ. ಈ ಅನುದಾನ ಮೊದಲೆ ಜಿಲ್ಲೆಗೆ ದೊರಕಿದ್ದಲ್ಲಿ ಕೊಡಗು ಅಭಿವೃದ್ಧಿಯನ್ನು ಕಾಣುತ್ತಿತ್ತು ಎಂದು ಯಮುನಾ ಚಂಗಪ್ಪ ವ್ಯಂಗ್ಯವಾಡಿದರು. ಕಾಂಗ್ರೆಸ್ ಸಮಾವೇಶದಲ್ಲಿ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕೂ ಹೆಚ್ಚಾಗಿ ಬಿಜೆಪಿಯನ್ನು ತೆಗಳುವುದಕ್ಕೆ ಸಮಯ ಬಳಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ಪ್ರಮುಖರನ್ನು ಲಜ್ಜೆಗೆಟ್ಟವರೆಂದು ನಿಂದಿಸಿರುವುದನ್ನು ಖಂಡಿಸಿದ ಅವರು ಸದನದಲ್ಲಿ ನಿದ್ದೆ ಮಾಡಿದಾಗ ಸಿದ್ದರಾಮಯ್ಯ ಅವರಿಗೆ ಲಜ್ಜೆಯಾಗಲಿಲ್ಲವೆ ಎಂದು ಯಮುನಾ ಚಂಗಪ್ಪ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾದ ನಗರ ಘಟಕದ ಅಧ್ಯಕ್ಷರಾದ ಅನಿತಾ ಪೂವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: