ಪ್ರಮುಖ ಸುದ್ದಿಮೈಸೂರು

ನಾನು ಸ್ವಾಭಿಮಾನಿ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ: ಅಂಬರೀಷ್

ಮಂಡ್ಯ ಜನರು ಸ್ವಾಭಿಮಾನಿಗಳು ಅದರಂತೆ ನಾನೂ ಸ್ವಾಭಿಮಾನಿ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಆ ಸ್ಥಳದಲ್ಲಿ ಒಂದು ಕ್ಷಣ ನಿಲ್ಲುವುದಿಲ್ಲ ಎಂದು ಮಾಜಿ ಸಚಿವ ಚಿತ್ರನಟ ಅಂಬರೀಷ್ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.

ಮಂಡ್ಯದ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿ ನಂತರ ಮಾತನಾಡಿ, ಚಿತ್ರರಂಗ, ರಾಜಕೀಯ ರಂಗದ ಜನರು ನನಗೆ ಸಹಾಯ ಮಾಡಿದ್ದಾರೆ. ನನ್ನ ಮಾತು ಒರಟಷ್ಟೇ. ಕ್ಷೇತ್ರದಲ್ಲಿ ಯುವಜನತೆ ಬೆಳೆಯಬೇಕು. ಮುಖ್ಯಮಂತ್ರಿಗಳು ರಾಜೀನಾಮೆ ಕೇಳಿದ್ದರೆ ನಾನೇ ಖುದ್ದಾಗಿ ರಾಜೀನಾಮೆ ಪತ್ರ ನೀಡುತ್ತಿದ್ದೆ.  ಹೀಗೆ ಏಕಾಏಕಿ ತೆಗೆದು ಹಾಕಿರುವುದು ಬೇಜಾರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಚುನಾವಣೆಗೆ ಮಂಡ್ಯದಲ್ಲಿ ಸ್ಪರ್ಧಿಸಲು ರಮ್ಯಾರಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ರಾಜಕೀಯದಲ್ಲಿ ನಾನು ನನ್ನ ಪತ್ನಿ ಹಾಗೂ ಮಕ್ಕಳನ್ನು ಬೆಳೆಸಬೇಕಾಗಿಲ್ಲ. ಕ್ಷೇತ್ರದಲ್ಲಿ ಪಕ್ಷಕ್ಕೆ ದುಡಿದವರು ಹಾಗೂ ಅವರ ಮಕ್ಕಳು ಬೆಳೆಯಬೇಕು ಎಂದರು.

“ಜೆಡಿಎಸ್‍” ಗೆ..!  : ಜೆಡಿಎಸ್ ಸೇರುವ ಬಗ್ಗೆ ನಾನು ಈಗಲೇ ಏನನ್ನು ಹೇಳುವುದಿಲ್ಲ. ಮುಂದಿನ ನಿರ್ಧಾರ ಕೈಗೊಳ್ಳಲು ಸಮಯಾವಕಾಶ ಬೇಕಾಗಿದೆ ಎಂದರು.

ನೋಟು ನಿಷೇಧಕ್ಕೆ ಪ್ರಶಂಸೆ : ಪ್ರಧಾನಿ ನರೇಂದ್ರ ಮೋದಿಯವರು ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿರುವುದು ಶ್ಲಾಘನೀಯ. ಎರಡು ಸಾವಿರ ಮೌಲ್ಯದ ಹೊಸ ನೋಟು ಬರುವುದೆಂದು ಮಾಹಿತಿ ಇತ್ತು. ಆದರೆ, ಹಳೆ ನೋಟುಗಳ ನಿಷೇಧದ ಬಗ್ಗೆ ತಿಳಿದಿರಲಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು, ಮುಡಾ ಅಧ್ಯಕ್ಷ ಮುನಾವರ್ ಖಾನ್,  ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಹಾಗೂ ಇತರರು ಉಪಸ್ಥಿತರಿದ್ದರು

Leave a Reply

comments

Related Articles

error: