ಪ್ರಮುಖ ಸುದ್ದಿಮೈಸೂರು

ಬಿಜೆಪಿಯವರು ಜೈಲಿಗೆ ಹೋಗಿ ಬೀಗತನ ಮಾಡುತ್ತಿದ್ದರಾ? : ಬಿಜೆಪಿ ನಾಯಕರ ವಿರುದ್ಧ ಸಿಎಂ ವಾಗ್ದಾಳಿ

ಮೈಸೂರು,ಜ.11:- ನೂತನ ತಾಲೂಕಾಗಿ ರಚನೆಯಾಗಿರುವ ಸರಗೂರು ಸರಗೂರು ಪಟ್ಟಣದಲ್ಲಿ ಎಚ್.ಡಿ‌.ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಸರ್ಕಾರಿ ಸವಲತ್ತುಗಳ ವಿತರಣಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಬಳಿಕ ಸರ್ಕಾರಿ ಹಣದಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಎಂಬ ಜೆಡಿಎಸ್ ಮುಖಂಡ ಅಡಗೂರು ಎಚ್.ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು  ಮುಖ್ಯಮಂತ್ರಿ ಸರ್ಕಾರಿ ಕಾರ್ಯಕ್ರಮಕ್ಕೆ ಸ್ವಂತ ಖರ್ಚಿನಲ್ಲಿ ಹೋಗೋಲಿಕ್ಕೆ ಆಗತ್ತಾ ಎಂದು ಪ್ರಶ್ನಿಸಿದರಲ್ಲದೇ, ಸುಮ್ಮನೆ ಟೀಕೆ ಮಾಡಬೇಕೆಂದು ಟೀಕೆ ಮಾಡಬಾರದು. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ ಹೋಗುತ್ತಾರೆ. ಬೇರೆ ಊರುಗಳಿಗೆ ಹೋಗುವಾಗ ಮೂರು ಮೂರು ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಾರೆ. ಅವರು ಸ್ವಂತ ಖರ್ಚಿನಲ್ಲಿ ಹೋಗುತ್ತಾರಾ? ಜೆಡಿಎಸ್, ಬಿಜೆಪಿಯವರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿರೋಧ ಪಕ್ಷದ ನಾಯಕರಿಗೆ ಪಂಥಾಹ್ವಾನ ನೀಡಿದ ಸಿಎಂ ಸಿದ್ದರಾಮಯ್ಯ ಬನ್ನಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದರು. ಸುಳ್ಳನ್ನೇ ಹೇಳಿ ಬದುಕಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ನಮಗೆ ಅನುದಾನವನ್ನು ಭಿಕ್ಷೆ ಕೊಟ್ಟಿದ್ದ್ಯಾ.ಅನುದಾನದ ಲೆಕ್ಕ ಕೊಡಿ ಎಂದು ಅಮಿತ್ ಷಾ ಕೇಳುತ್ತಾರೆ. ನಾನೇಕೆ ಅಮಿತ್ ಷಾಗೆ ಲೆಕ್ಕ ಕೊಡಲಿ, ನಾನು ಲೆಕ್ಕ ಕೊಡಬೇಕಿರೋದು ರಾಜ್ಯದ 6.5. ಕೋಟಿ ಜನಕ್ಕೆ ಎಂದು ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು. ಅಮಿತ್ ಷಾ ನಮ್ಮ ಸರ್ಕಾರದ ಬಗ್ಗೆ ಭ್ರಷ್ಟಾಚಾರ ಎಂದು ಮಾತನಾಡುತ್ತಾರೆ. ಅಮಿತ್ ಷಾ ಪಕ್ಕದಲ್ಲೇ ಇರುವ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು ಎಲ್ಲ ಜೈಲಿಗೆ ಹೋಗಿದ್ದರಲ್ಲ. ಬಿಜೆಪಿಯವರು ಜೈಲಿಗೆ ಹೋಗಿ ಬೀಗತನ ಮಾಡುತ್ತಿದ್ದರಾ?ಅಮಿತ್ ಷಾ ಕೂಡ ಜೈಲಿಗೆ ಹೋಗಿ ಬಂದ ಗಿರಾಕಿ. ಇವೆಲ್ಲವನ್ನೂ ಹೇಳಲಿಕ್ಕೆ  ಹೋದರೆ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಾರೆ ಅಂತಾರೆ. ಈ ಸತ್ಯ ಎಲ್ಲವನ್ನೂ ಜೇಬಿನಲ್ಲಿ ಇಟ್ಕೊಂಡು ಓಡಾಡೋಕೆ ಆಗುತ್ತಾ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಯವರು ಉಗ್ರಗಾಮಿಗಳು ಎಂದು ನೀಡಿದ್ದ ಹೇಳಿಕೆಗೆ ಸಮರ್ಥನೆ ನೀಡಿದ ಅವರು ಹೆಣದ ಮೇಲೆ ರಾಜಕೀಯ ಮಾಡುವವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರಲ್ಲದೇ ಬಿಜೆಪಿ ಯವರು ಕೋಮು ಭಾವನೆ ಕೆರಳಿಸುವ ಮೂಲಕ ಮತಗಳ ಧೃವೀಕರಣಕ್ಕೆ ಮುಂದಾಗಿದ್ದಾರೆ. ಇದರಿಂದ ಅವರಿಗೆ ಲಾಭವಾಗಲಿದೆ ಎಂದು ಭಾವಿಸಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿಯ ಲಾಭವಾಗದೇ, ಮುಳುವಾಗಲಿದೆ ಎಂದು ವಿಶ್ಲೇಷಿಸಿದರು. ಪಿ.ಎಫ್.ಐ, ಎಸ್.ಡಿ.ಪಿ.ಐ ಮಾತ್ರವಲ್ಲದೆ ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಡಾ.ಗೀತಾ ಮಹದೇವಪ್ರಸಾದ್, ಸಂಸದ ಧ್ರುವ ನಾರಾಯಣ, ವಿ.ಎಸ್.ಉಗ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: