ಪ್ರಮುಖ ಸುದ್ದಿಮೈಸೂರು

2 ದಿನಗಳ ಪಾಸ್‌ಪೋರ್ಟ್ ಸೇವಾ ಶಿಬಿರಕ್ಕೆ ಚಾಲನೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ 2 ದಿನಗಳ ಪಾಸ್‌ಪೋರ್ಟ್ ಸೇವಾ ಶಿಬಿರಕ್ಕೆ ಶಾಸಕ ಜಿ.ಟಿ. ದೇವೇಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಹಿಂದೆ ಪಾಸ್‌ಪೋರ್ಟ್ ಪಡೆದುಕೊಳ್ಳಬೇಕಾದರೆ ದೂರದ ದೆಹಲಿ, ಬೆಂಗಳೂರಿಗೆ ಹೋಗಬೇಕಿತ್ತು. ಇದರಿಂದ ಸಮಯ ವ್ಯರ್ಥವಾಗುವುದಲ್ಲದೆ ಗಂಟೆಗಟ್ಟಲೆ ಕ್ಯೂನಲ್ಲಿ ದಣಿಯಬೇಕಿತ್ತು. ಇದೆಲ್ಲವನ್ನು ನಿವಾರಿಸಲೆಂದೇ ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಪಾಸ್‌ಪೋರ್ಟ್ ಸೇವಾ ಶಿಬಿರ ಆಯೋಜಿಸಿ ಮನೆ ಬಾಗಿಲಿಗೆ ಪಾಸ್‌ಪೋರ್ಟ್ ನೀಡುವ ಕೆಲಸ ಮಾಡಲಾಗುತ್ತಿದೆ. ಇಂದು ಪ್ರತಿಯೊಬ್ಬರಿಗೂ ಪಾಸ್‌ಪೋರ್ಟ್‌ನ ಅವಶ್ಯಕತೆ ಇದ್ದು ಶಿಕ್ಷಣ, ಉದ್ಯೋಗ ಸೇರಿದಂತೆ ಇನ್ನಿತರೆ ಕಾರಣಗಳಿಗೆ ವಿದೇಶಗಳಿಗೆ ತೆರಳಬೇಕಾದ ಸಂದರ್ಭ ಬರುತ್ತದೆ. ಸ್ಥಳೀಯವಾಗಿ ಪಾಸ್‌ಪೋರ್ಟ್ ಸೇವಾಕೇಂದ್ರಗಳಿದ್ದರೆ ದೂರದ ಊರುಗಳಿಗೆ ಅಲೆಯುವುದು ತಪ್ಪುತ್ತದೆ. ಮೈಸೂರಿನಿಂದ ಪಾಸ್‌ಪೋರ್ಟ್‌ಗಳಿಗೆ ತುಂಬಾ ಬೇಡಿಕೆಯಿದ್ದು ನಗರದಲ್ಲಿ ಶಾಶ್ವತ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆರಂಭಿಸಲು ಬೆಂಗಳೂರಿನ ಪ್ರಾದೇಶಿಕ ಕಚೇರಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಉಪ ಪಾಸ್‌ಪೋರ್ಟ್ ಅಧಿಕಾರಿ ಸುಧಿ ಚೌದರಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಮೈಸೂರಿನಲ್ಲಿ ಪಾಸ್‌ಪೋರ್ಟ್ ಸೇವಾ ಶಿಬಿರವನ್ನು ಆಯೋಜಿಸುತ್ತಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ 400 ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 350 ಮಂದಿಗೆ ಪಾಸ್‌ಪೋರ್ಟ್ ನೀಡಲಾಗಿದೆ. ಭವಿಷ್ಯದಲ್ಲಿ ಇನ್ನೂ ಉತ್ತಮವಾಗಿ ಸೇವೆ ನೀಡಲು ಹಾಗೂ ಮೈಸೂರಿನ ನಾಗರಿಕರ ಬೇಡಿಕೆ ಈಡೇರಿಸಲು ಪರಿಶೀಲನೆಯ ಅವಧಿಯನ್ನು 25 ದಿನಗಳಿಂದ 13 ದಿನಗಳಿಗೆ ಇಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‌ಸೈಟ್ ವೀಕ್ಷಿಸಬಹುದು ಎಂದು ಹೇಳಿದರು.

೨ದಿನಗಳ ಪಾಸ್‌ಪೋರ್ಟ್ ಸೇವಾ ಶಿಬಿರದಲ್ಲಿ ೪೦೦ ಅರ್ಜಿಗಳನ್ನು ಸಲ್ಲಿಸಲು ಅವಕಾಶಗಳಿದ್ದು ದಾಖಲೆಗಳನ್ನು ಪರಿಶೀಲಿಸಿ ಪೊಲೀಸರ ಪರಿಶೀಲನೆಯ ನಂತರ ಅಂಚೆ ಮೂಲಕ ೧೫ರಿಂದ ೨೦ದಿನಗಳಲ್ಲಿ ಪಾಸ್‌ಪೋರ್ಟ್ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಮೇಯರ್ ಬಿ.ಎಲ್.ಭೈರಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕಾ.ರಾಮೇಶ್ವರಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ, ಉಪಾಧ್ಯಕ್ಷ ನಟರಾಜ್, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್ ಸೇರಿದಂತೆ ಇನ್ನಿತರರು ಇದ್ದರು.

Leave a Reply

comments

Related Articles

error: