ಕರ್ನಾಟಕ

ಜೀವಿಜಯ ಸೋಲಿಗೆ ನಾಣಯ್ಯ ಕಾರಣ : ಜೆಡಿಎಸ್ ಸಂ.ಕಾರ್ಯದರ್ಶಿ ಅಣ್ಣಯ್ಯ ಆರೋಪ

ರಾಜ್ಯ(ಮಡಿಕೇರಿ) ಜ.12 :-  ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಸೋಲು ಅನುಭವಿಸಲು ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರೇ ನೇರ ಕಾರಣವೆಂದು ಜಾತ್ಯಾತೀತ ಜನತಾದಳದ ಸಂಘಟನಾ ಕಾರ್ಯದರ್ಶಿ ಪಿ.ಡಿ.ಅಣ್ಣಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಟಸ್ಥ ಜನತಾದಳದ ಹೆಸರಿನಲ್ಲಿ ಎಂ.ಸಿ.ನಾಣಯ್ಯ ಅವರ ಬಣ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯವೆಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಜೀವಿಜಯ ಅವರ ಪರ ಎಂ.ಸಿ.ನಾಣಯ್ಯ ಅವರು ಯಾವುದೇ ಪ್ರಚಾರ ಅಥವಾ ಹೋರಾಟವನ್ನು ಮಾಡಿಲ್ಲ. ಪಕ್ಷದಿಂದ ಎಲ್ಲಾ ಅಧಿಕಾರವನ್ನು ಅನುಭವಿಸಿರುವ ಅವರು, ಇದೀಗ ಬಣ ರಾಜಕಾರಣದ ಮೂಲಕ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ. ವಿಚಾರವಂತರಾಗಿರುವ ಎಂ.ಸಿ. ನಾಣಯ್ಯ ಅವರ ಬಗ್ಗೆ ಜೆಡಿಎಸ್‍ನ ಎಲ್ಲಾ ಕಾರ್ಯಕರ್ತರಿಗೂ ಗೌರವವಿದೆ. ಅದೇ ರೀತಿ ಹಿರಿಯ ರಾಜಕಾರಣಿ ಜೀವಿಜಯ ಅವರಿಗೂ ತಮ್ಮದೇ ಆದ ಘನತೆ ಗೌರವಗಳಿದೆ. ಇದನ್ನು ತಟಸ್ಥ ಜೆಡಿಎಸ್ ಬಣ ಎಂದು ಹೇಳಿಕೊಳ್ಳುತ್ತಿರುವವರು ಅರಿತುಕೊಳ್ಳಬೇಕೆಂದು ಅಣ್ಣಯ್ಯ ಹೇಳಿದರು. ಕೊಡಗು ಜೆಡಿಎಸ್‍ನಲ್ಲಿ ಯಾವುದೇ ಬಂಡಾಯವಿಲ್ಲ. ಕೆಲವು ವಿಚಾರಗಳ ಬಗ್ಗೆ ಪರಸ್ಪರ ಅಸಮಾಧಾನವಿದ್ದು, ಇದನ್ನು ರಾಜ್ಯದ ನಾಯಕರು ಸರಿಪಡಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವಕ್ತಾರರಾದ ಕೆ.ಎಸ್. ಕಾಂತರಾಜು ಮಾತನಾಡಿ, ಜೀವಿಜಯ ಅವರ ವಿರುದ್ಧದ ಹೇಳಿಕೆ ಖಂಡನೀಯವೆಂದರು. ಎಂ.ಸಿ.ನಾಣಯ್ಯ ಅವರು, ಚುನಾಯಿತ ಜನಪ್ರತಿನಿಧಿಯಲ್ಲದಿದ್ದರು ಜೆಡಿಎಸ್ ಮೂಲಕ ಎಲ್ಲಾ ಅಧಿಕಾರದ ಲಾಭವನ್ನು ಪಡೆದಿದ್ದಾರೆ. ಬಿಜೆಪಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಶಿಫಾರಸು ಮಾಡಿದ ನಾಣಯ್ಯ ಅವರು ಪರೋಕ್ಷವಾಗಿ ಬಿಜೆಪಿಗೆ ಸಹಕಾರ ನೀಡುತ್ತಿದ್ದರು ಎಂದು ಆರೋಪಿಸಿದರು. ಜೆಡಿಎಸ್‍ನ ಮೇಲೆ ನೈಜ ಅಭಿಮಾನವಿದ್ದಲ್ಲಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸಲಿ ಎಂದು ಕಾಂತರಾಜು ಸವಾಲೆಸೆದರು. ಜನವರಿ 25 ರಂದು ಮಧುಬಂಗಾರಪ್ಪ ಅವರು ಯುವ ಜೆಡಿಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅಲ್ಲದೆ, ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಅವರು ಕೂಡ ಸದ್ಯದಲ್ಲೇ ಜಿಲ್ಲೆಗೆ ಆಗಮಿಸಲಿದ್ದು ಪಕ್ಷದೊಳಗಿನ ಎಲ್ಲಾ ಗೊಂದಲಗಳನ್ನು ನಿವಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋಬಳಿ ಕಾರ್ಯಾಧ್ಯಕ್ಷ ಕೆ.ಪಿ.ರಾಜು ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: