ಮೈಸೂರು

ಮೈಸೂರಿಗೆ ನ.21 ರಂದು ‘ಮಂಗಲಗೋಯಾತ್ರೆ’ ಆಗಮನ

ಮೈಸೂರಿಗೆ ನ.21 ರಂದು ‘ಮಂಗಲ ಗೋಯಾತ್ರೆ’ ಆಗಮಿಸುತ್ತಿರುವ ಪ್ರಯುಕ್ತ  ಶ್ರೀರಾಮಚಂದ್ರಾಪುರಮಠವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯದ ಅಧ್ಯಕ್ಷ  ಬೇತ ಕೃಷ್ಣಭಟ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಮಧ್ಯಾಹ್ನ 3.30ಕ್ಕೆ ಗೋವಿನ ಬೃಹತ್ ಸ್ತಬ್ಧಚಿತ್ರವುಳ್ಳ ರಥ ಸೇರಿದಂತೆ ಆಗಮಿಸುವ ರಥಗಳನ್ನು ನಗರದ ರಾಮಸ್ವಾಮಿ ವೃತ್ತದಲ್ಲಿ ಬರಮಾಡಿಕೊಂಡು ಮೆರವಣಿಗೆ ಮೂಲಕ ಜಗನ್ಮೋಹನ ಅರಮನೆಯ ಸಭಾಂಗಣ ತಲುಪಲಾಗುವುದು.

ನಂತರ ಸಂಜೆ 4.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ‘ಗೋವು ಮತ್ತು ನಾವು’ ಎಂಬ ವಿಷಯದ ಕುರಿತಾಗಿ ಹಿರಿಯ ವಕೀಲ ಸಿ.ವಿ.ಕೇಶವಮೂರ್ತಿ, ಸಾಹಿತಿ ಮಳಲಿ ವಸಂತಕುಮಾರ್ ಹಾಗೂ ಸಾವಯವ ಕೃಷಿ ತಜ್ಞ ಬಂಡೇಲ ಗೋಪಾಲಕೃಷ್ಣ ಭಟ್ ರವರು ರೈತರು, ವಿದ್ಯಾರ್ಥಿಗಳು ಮತ್ತು ಗೋಪ್ರೇಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಂಜೆ 5.30ಕ್ಕೆ ‘ಸುರಭಿ ಸಂತ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಪಾಂಡವಪುರದ ದುರ್ದಂಡೇಶ್ವರ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಧಾರ್ಮಿಕ ಚಿಂತಕ ವೇ.ಬ್ರ.ಡಾ.ಭಾನುಪ್ರಕಾಶ್ ಶರ್ಮಾ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಮೇಲುಕೋಟೆಯ ವಂಗೀಪುರಂ ನಂಬಿ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಮತ್ತು ನೀಲಕಂಠ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ ಉಪಸ್ಥಿತರಿರುತ್ತಾರೆ.

ಇದಕ್ಕೂ ಮುನ್ನ ಬೆಳಗ್ಗೆ 7 ಗಂಟೆಗೆ ರಾಮಸ್ವಾಮಿ ವೃತ್ತದಿಂದ ಜಗನ್ಮೋಹನ ಅರಮನೆಯವರೆಗೂ ಮಂಗಲಗೋಯಾತ್ರೆಯ ರಥ ಬರುವ ದಾರಿಯನ್ನು ಪ್ಲಾಸ್ಟಿಕ್ ಮುಕ್ತ ರಸ್ತೆಯನ್ನಾಗಿಸುವ ‘ಅಮೃತಪಥ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯದ ದಿಗ್ದರ್ಶಕ ವಿದ್ವಾನ್ ಕೃಷ್ಣಮಂಜ ಭಟ್ಟ, ಮಂಗಲಗೋಯಾತ್ರೆಯ ಮೈಸೂರು ಜಿಲ್ಲಾ ಸಂಯೋಜಕ ರಾಕೇಶ್ ಭಟ್, ಸುಜಾತ ಶಂಕರನಾರಾಯಣ ಭಟ್ ಹಾಗೂ ಗಾಯಿತ್ರಿ ಗಿರಿಜಾಶಂಕರ್ ಉಪಸ್ಥಿತರಿದ್ದರು.

Leave a Reply

comments

Related Articles

error: