ಮೈಸೂರು

ಮುಖ್ಯಮಂತ್ರಿಗಳ ಅನಿಲ ಭಾಗ್ಯ  ಮೊದಲ ಹಂತದಲ್ಲಿ 6322 ಕುಟುಂಬಗಳಿಗೆ ವಿತರಣೆ ಜಿ.ಪಂ ಸಭೆಯಲ್ಲಿ ಅಧಿಕಾರಿ ಹೇಳಿಕೆ

ಮೈಸೂರು.ಜ.12:-  ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ವಿವಿಧ ಇಲಾಖೆಗಳ ಮೂಲಕ 19,872 ಫಲಾನುಭವಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗಿದೆ.  ಮೊದಲ ಹಂತದಲ್ಲಿ 6322 ಜನರಿಗೆ ನೀಡಲಾಗುವುದು ಎಂದು ಸಭೆಗೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಅಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು      ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 4040 ರೂ.ಗಳ ವೆಚ್ಚದಲ್ಲಿ ಮೊದಲ ಹಂತದಲ್ಲಿ ಜಿಲ್ಲೆಯ ತಾಲೂಕುಗಳಾದ ಮೈಸೂರು 174, ತಿ. ನರಸೀಪುರ 2972, ಹುಣಸೂರು 3, ಕೆ.ಆರ್. ನಗರ 2187, ಹೆಚ್.ಡಿ.ಕೋಟೆ 33 ಹಾಗೂ ಪಿರಿಯಾಪಟ್ಟಣದಲ್ಲಿ 932 ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುವುದು.
ರೂ.1940ರ ಒಂದು ಸಿಲಿಂಡರ್‍ನ ಅನಿಲ ಸಂಪರ್ಕ, ರೂ 1000ಗಳ 2 ಬರ್ನರ್‍ಗಳ ಗ್ಯಾಸ್ ಸ್ಟವ್, 550 ರೂರಂತೆ 2 ಸಿಲಿಂಡರ್ ಒಳಗೊಂಡಿವೆ ಎಂದು ಸಭೆಗೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು.
ಸಾಮಾಜಿಕ ನ್ಯಾಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಬಸವಣ್ಣ  ಮಾತನಾಡಿ  ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ರೈತರಿಗೆ ಜಿಲ್ಲಾ ಪಂಚಾಯತ್‍ನಲ್ಲಿ 5.40 ಕೋಟಿ ಸಬ್ಸಿಡಿ ಅನುದಾನವನ್ನು ಬ್ಯಾಂಕ್‍ಗಳಿಗೆ ನೀಡಲಾಗಿದೆ. ಆದರೆ 3 ವರ್ಷಗಳಿಂದ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದರು. ಬ್ಯಾಂಕ್ ಅಧಿಕಾರಿಗಳು ಸಾಲ ನೀಡದಿದ್ದರೆ ಲಿಖಿತವಾಗಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಯಡಿ ಬಿಡುಗಡೆಯಾಗಿರುವ ಹಣವನ್ನು ಅಧಿಕಾರಿಗಳು  ಫಲಾನುಭವಿಗಳಿಗೆ ತಲುಪುವಂತೆ ಹೆಚ್ಚು ಆದ್ಯತೆ ನೀಡಬೇಕು, ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಬಾಕಿ ಇರುವ ಕಾಮಗಾರಿ ಮತ್ತು ಅದರ ನಿರ್ವಹಣೆ ಮುಖ್ಯವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ ರಾಜಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಯೋಜನಾಧಿಕಾರಿ ಪ್ರಭುಸ್ವಾಮಿ,  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: