ಮೈಸೂರು

ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಿದರೆ ಮಾತ್ರ ನಮ್ಮ ರಾಷ್ಟ್ರವನ್ನು ಉತ್ತಮ ರೀತಿಯಲ್ಲಿ ಕಟ್ಟಲು ಸಾಧ್ಯ : ಡಾ. ಸಿದ್ದರಾಜು

ಮೈಸೂರು, ಜ.13: -ಎನ್.ಆರ್. ಸಮೂಹದ ಪರೋಪಕಾರಿ ಅಂಗವಾಗಿರುವ ಎನ್.ಆರ್. ಫೌಂಡೇಶನ್‍ನ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆ ಇಂದು ತನ್ನ 30ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿತು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ಸಿದ್ದರಾಜು ಈ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾವು ನಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಿದರೆ ಮಾತ್ರ ನಮ್ಮ ರಾಷ್ಟ್ರವನ್ನು ಉತ್ತಮ ರೀತಿಯಲ್ಲಿ ಕಟ್ಟಲು ಸಾಧ್ಯ. ಮಕ್ಕಳಿಗೆ ಶಿಕ್ಷಣ ಒದಗಿಸುವ ಜೊತೆಗೆ, ಅಗತ್ಯ ಜೀವನ ಕೌಶಲಗಳನ್ನು ಸಹ ನೀಡುವ ಮೂಲಕ ನಾವು ಉತ್ತಮ ಸಮಾಜವನ್ನು ಖಾತ್ರಿಪಡಿಸಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು. ಎನ್.ಆರ್. ಸಮೂಹದ ಅಧ್ಯಕ್ಷತೆ ವಹಿಸಿದ್ದ ಎನ್.ಆರ್. ಸಮೂಹದ ಅಧ್ಯಕ್ಷ ಆರ್. ಗುರು ಮಾತನಾಡಿ “ಇದು ನಮಗೆ ಹೆಮ್ಮೆಯ ದಿನವಾಗಿದೆ. ಈ ವರ್ಷಗಳಲ್ಲಿ ಆರ್‍ಎಂಎಸ್‍ಡಿ ಸಂಸ್ಥೆಯು ಹಲವಾರು ಜೀವನಗಳಿಗೆ ಒಂದು ಅರ್ಥವನ್ನು ತುಂಬಿದೆ. ವಿದ್ಯಾರ್ಥಿಗಳ ಈ ಉತ್ಸಾಹ ಮತ್ತು ಹುಮ್ಮಸ್ಸು ಬಹಳ ಅಮೂಲ್ಯವಾಗಿದೆ; ಇದು ಈಗ ನಾವು ಮಾಡುತ್ತಿರುವ ಕಾರ್ಯವನ್ನು ಇನ್ನಷ್ಟು ಹುರುಪಿನಿಂದ ಮುಂದುವರಿಸಲು ನಮ್ಮಲ್ಲಿ ಉತ್ಸಾಹ ತುಂಬಿದೆ” ಎಂದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್. ಗೀತಾ ಈ ಸಮಾರಂಭದ ಗೌರವ  ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ, ಹೊಸದಾಗಿ ನಿರ್ಮಿಸಿದ ಪ್ರೌಢಶಾಲೆ ಬಿಲ್ಡಿಂಗ್ ಬ್ಲಾಕ್ಸ್ 3 ಹೊಸ ತರಗತಿ ಕೊಠಡಿಗಳು, 1 ಪೂರ್ಣ ಪ್ರಮಾಣದ ಗ್ರಂಥಾಲಯ ಮತ್ತು 50 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ ನಿಲಯ ಕೂಡ ಉದ್ಘಾಟನೆಗೊಂಡಿತು.  ಶಾಲೆಯ ವಾರ್ಷಿಕ ದಿನವು ಆರ್‍ಎಂಎಸ್‍ಡಿ ಶಾಲೆಯ ಅತಿ ದೊಡ್ಡ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉತ್ಸಾಹ ಮತ್ತು ಹುಮ್ಮಸ್ಸಿನಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಅದ್ಭುತವಾದ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಪ್ರೇಕ್ಷಕರ ಮನಸೂರೆಗೊಂಡರು. ಪುಷ್ಪಾಂಜಲಿ, ಇಂಗ್ಲಿಷ್ ಆ್ಯಕ್ಷನ್ ಹಾಡುಗಳು, ಕನ್ನಡ ಜಾನಪದ ನೃತ್ಯ, ಶಾಸ್ತ್ರಿಯ ಸಂಗೀತ, ಕನ್ನಡ ಸಮೂಹ ನೃತ್ಯ, “ಗಂಧರ್ವಸೇನಾ” ನಾಟಕ, ಹಿಂದಿ ಪಟ್ಟು ನೃತ್ಯ ಮತ್ತು ಸಮೂಹಗಾಯನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜನರ ಮೆಚ್ಚುಗೆ ಗಳಿಸಿದವು.

ಬಹುಮಾನ ವಿತರಣೆಯ ನಂತರ ಕಾರ್ಯಕ್ರಮ ಸಮಾಪ್ತಿಯಾಯಿತು. (ಎಸ್.ಎಚ್)

Leave a Reply

comments

Related Articles

error: