ಮೈಸೂರು

ಮಾನವೀಯ ಸಂಬಂಧಗಳನ್ನು ವೃದ್ಧಿಸುವುದೇ ಹಬ್ಬಗಳ ಆಶಯ : ಶ್ವೇತಾ ಮಡಪ್ಪಾಡಿ ಹೇಳಿಕೆ

ಮೈಸೂರು,ಜ.13:-“ಮನುಷ್ಯ ಸಂಬಂಧಗಳ ನಡುವೆ ಹಲವು ಕಾರಣಗಳಿಂದಾಗಿ ಒಡಕುಗಳು ಮೂಡುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಹಬ್ಬಗಳನ್ನು ಹೊಸ ಮಾನವೀಯ ಮೌಲ್ಯಗಳೊಂದಿಗೆ ಆಚರಿಸುವಂತಾಗಬೇಕಿದೆ. ಹಬ್ಬಗಳ ಆಚರಣೆಯ ಹಿಂದಿನ ಉದ್ದೇಶವೇ ಪ್ರೀತಿ ಹಂಚುವುದು ಮತ್ತು ಸಂಬಂಧಗಳನ್ನು ಕಟ್ಟುವುದು” ಎಂದು ಕರ್ನಾಟಕ ಅರೆಭಾಷೆ ಅಕಾಡೆಮಿ ಸದಸ್ಯೆ ಶ್ವೇತಾ ಮಡಪ್ಪಾಡಿ ಹೇಳಿದರು.

ಶನಿವಾರ ಮೈಸೂರಿನ ಶಕ್ತಿಧಾಮ(ನಿರಾಶ್ರಿತ ಮಹಿಳೆಯರಿಗಾಗಿ ಇರುವ ಆಶ್ರಮ)ದಲ್ಲಿ ಪಾತಿ ಫೌಂಡೇಷನ್‍ನ ವತಿಯಿಂದ ನಡೆದ ‘ಸಂಕ್ರಾಂತಿ ಆಚರಣೆ’ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿರಾಶ್ರಿತ ಮಹಿಳೆಯರನ್ನುದ್ದೇಶಿಸಿ ಅವರು ಮಾತನಾಡಿದರು.  ಹೆಣ್ಣಿನ ಬದುಕೆಂಬುದು ನಿರಂತರ ಹೋರಾಟ. ದೇಶದಲ್ಲಿ ಸಾವಿರಾರು ಅನಾಥಾಶ್ರಮಗಳಿವೆ. ಅಲ್ಲೆಲ್ಲ ಸಾವಿರಾರು ಹೆಣ್ಣು ಮಕ್ಕಳು ಆಶ್ರಯ ಪಡೆದಿದ್ದಾರೆ. ಇಲ್ಲಿ ಅವರನ್ನು ನಿರಾಶ್ರಿತರನ್ನಾಗಿ ಸೃಷ್ಟಿಸುತ್ತಿರುವುದರ ಹೊಣೆಯನ್ನು ನಮ್ಮ ಸಮಾಜವೇ ಹೊರಬೇಕಾಗುತ್ತದೆ ಎಂದು ಹೇಳಿದರು. ಧರ್ಮವು ಸಾವುಗಳನ್ನು ಸೃಷ್ಟಿಸುತ್ತಿರುವ ಪರಂಪರೆಗೆ ಕೊನೆಯಾಗಲಿ. ಬದಲಾಗಿ ಸಂಬಂಧಗಳನ್ನು ಬೆಸೆಯುವ ಆಚರಣೆಯಾಗಲಿ. ಅಂಥ ಆಚರಣೆಯ ಭಾಗವಾಗಿ ಪಾಥಿ ಫೌಂಡೇಷನ್‍ನ ಪಾರ್ಥಸಾರಥಿಯವರು ಸಂಕ್ರಾಂತಿಯನ್ನು ನಿರಾಶ್ರಿತರಿಗಾಗಿ, ಶಕ್ತಿಧಾಮದಲ್ಲಿ ಆಚರಿಸಿಕೊಳ್ಳುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಪಾತಿ ಫೌಂಡೇಷನ್‍ನ ಪಾರ್ಥಸಾರಥಿ ಮಾತನಾಡಿ, “ಸಮಾಜದಲ್ಲಿ ಬಾಂಧವ್ಯ ಬೆಸೆಯುವ ಉದ್ದೇಶಕ್ಕಾಗಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ. ಸಂಕ್ರಾಂತಿಯ ದಿನ ಮನೆಮನೆಗಳಲ್ಲಿ ಹಬ್ಬದ ಸಂಭ್ರಮವಿರುತ್ತದೆ. ಆದರೆ ಅನಾಥ ಆಶ್ರಮಗಳಲ್ಲಿ ಬದುಕುವ ಜನ ಸಂತೋಷದಿಂದ ವಿಮುಖಗೊಂಡಿರುತ್ತಾರೆ. ಅವರಿಗೂ ಸಂತೋಷ ಹಂಚುವ ಕಿರುಪ್ರಯತ್ನವನ್ನು ಕಳೆದ ಹನ್ನೊಂದು ವರುಷದಿಂದ ಮಾಡಿಕೊಂಡು ಬಂದಿರುತ್ತೇನೆ. ಆ ನಿಟ್ಟಿನಲ್ಲಿ ಎರಡು ದಿನಗಳ ಮೊದಲೇ ಸಂಕ್ರಾಂತಿಯ ಸಿಹಿಯನ್ನು ಹಂಚುತ್ತಿದ್ದೇವೆ” ಎಂದರು. ಆಶ್ರಮದಲ್ಲಿದ್ದ ನಿರಾಶ್ರಿತ ಮಹಿಳೆಯರಿಗೆ ಸೀರೆ, ಬಳೆ, ಕಬ್ಬು, ಎಳ್ಳು, ಬೆಲ್ಲದ ಬಾಗಿನ ಅರ್ಪಿಸಿ ಶುಭಕೋರಲಾಯಿತು.

ವೇದಿಕೆಯ ಮೇಲೆ ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ರಾಕೇಶ್, ಯುವ ಕವಿ ಮಂಜು, ಅಥರ್ವ ಶೆಟ್ಟಿ ಪತ್ರಕರ್ತ ಶಿವಶಂಕರಸ್ವಾಮಿ,  ಮಹೇಂದ್ರ, ಕೃಷ್ಣ ಮೂರ್ತಿ, ಯೋಗೇಶ್, ಮಹದೇವು, ನವೀನ್, ದೀಪಕ್, ಮೊದಲಾದವರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: