
ಮೈಸೂರು
ಮೂಢನಂಬಿಕೆಗಳಿಗೆ ಜ್ಯೋತಿಷ್ಯರನ್ನು ದೂರಲಾಗುತ್ತಿದೆ: ಚಂದ್ರಶೇಖರ ಶಿವಾಚಾರ್ಯ ಶ್ರೀ
ಶಾರದಾ ವಿಲಾಸ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರದಂದು ಆಯೋಜಿಸಲಾಗಿದ್ದ ಮಾಯಕಾರ ಗುರುಕುಲದ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, ದೇಶದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ. ಅಲ್ಲದೇ ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿದೆ. ಮನುಷ್ಯ ಒಂದು ರೀತಿಯಲ್ಲಿ ರಾಕ್ಷಸ ಪ್ರವೃತ್ತಿ ಬೆಳೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ, ಹೀಗೆ ಪರಿಸರ ಮೇಲೆ ಹೆಚ್ಚು ಹಾನಿ ಉಂಟಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದರು.
ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಜ್ಯೋತಿಷ್ಯ ಅಂದರೆ ವಿಜ್ಞಾನ. ಜ್ಯೋತಿಷ್ಯರ ವಿರುದ್ಧ ಮಾಡಿರುವ ಅನೇಕ ಆರೋಪಗಳನ್ನು ಕೇಳಿದ್ದೇನೆ. ಸಮಾಜದಲ್ಲಿರುವ ಮೂಢನಂಬಿಕೆಗಳಿಗೆ ಜನ ಜ್ಯೋತಿಷ್ಯರನ್ನು ದೂರುತ್ತಾರೆ. ಜನ ಮನಸ್ಸಿನಲ್ಲಿ ಮೂಡುವ ಗೊಂದಲ ಮತ್ತು ಅನುಮಾನಗಳಿಗೂ ಜ್ಯೋತಿಷ್ಯರನ್ನೇ ದೂರಲಾಗುತ್ತದೆ ಎಂದರು.
ಮುಂದಾಗುವ ಘಟನೆಗಳ ಬಗ್ಗೆ ವಿಜ್ಞಾನದ ಸಹಾಯದೊಂದಿಗೆ ಪೂರ್ವಾನುನಿರ್ಧಾರವೇ ಜ್ಯೋತಿಷ್ಯ. ಇತ್ತೀಚಿಗೆ ಸಂಸ್ಕೃತ ವಿಶ್ವವಿದ್ಯಾನಿಲಯವೊಂದು ಜ್ಯೋತಿಷ್ಯದ ಮೇಲೆ ಸರ್ಟಿಫಿಕೇಟ್ ಕೋರ್ಸ್ ವೊಂದನ್ನು ಆರಂಭಿಸಿದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ್ಯೋತಿಷ್ಯರು ಟಿವಿಗಳಲ್ಲಿ ಕಾಣಿಸಲು ಆರಂಭವಾದಾಗ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜ್ಯೋತಿಷಿಗಳು ವೃತ್ತಿ ನಿಷ್ಠೆಯನ್ನು ಮರೆಯಬಾರದು ಎಂದು ಅವರು ಸಲಹೆ ನೀಡಿದರು.
ಇದೇ ವೇಳೇ ಮೂಗೂರು ಪ್ರಾಚೀನ ಪ್ರಶ್ನತಂತ್ರ ಕಿರುಗ್ರಂಥವನ್ನು ಹಾಗೂ ಚಂದ್ರವನ ಆಶ್ರಮದ ಚಂದ್ರವನ ಕಂಪು ಎಂಬ ಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ನಂತರ ಸುಮಾರು 129 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಅಲ್ಲದೇ ಹುಕ್ಕೇರಿಯ ಹಿರೇಮಠದ ಗುರುಶಾಂತೇಶ್ವರ ಸಂಸ್ಥಾನದ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದ್ಲಲಿ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿ, ಬೃಹನ್ಮಠ ಹಲಗೂರಿನ ಷ.ಬ್ರಂ.ರುದ್ರಮುನಿ ಶಿವಾಚಾರ್ಯಸ್ವಾಮಿ, ಶಿವಗಂಗಾ ಕ್ಷೇತ್ರದ ಷ.ಬ್ರ.ಮಲಯಶಾಂತ ಮುನಿ ಶಿವಾಚಾರ್ಯ ಮಹಾಸ್ವಾಮಿ, ಬೆಂಗಳೂರಿನ ವಿಭೂತಿ ಪುರ ವೀರಸಿಂಹಾಸನ ಸಂಸ್ಥಾನ ಮಠದ ಷ.ಬ್ರ.ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.