ಮೈಸೂರು

‘ವೈದ್ಯಕೀಯ ಗೋಷ್ಠಿ’ ಮತ್ತು ‘ಮಾ ಉತ್ಸವ್-2016’ ಡಿ.10, 11ರಂದು

ಮೈಸೂರು ಮೆಡಿಕಲ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಡಿ.10 ಮತ್ತು 11 ರಂದು ‘ವೈದ್ಯಕೀಯ ಗೋಷ್ಠಿ’ ಮತ್ತು ‘ಮಾ ಉತ್ಸವ್-2016’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಲುಮ್ನಿ ಸಂಘದ ಅಧ್ಯಕ್ಷ ಡಾ.ಜಿ.ಮರುಳಸಿದ್ದಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಡಿ.10ರಂದು ಬೆಳಗ್ಗೆ 9 ಗಂಟೆಗೆ ಜೆ.ಕೆ.ಗ್ರೌಂಡ್ಸ್ ನ ಅಮೃತ ಮಹೋತ್ಸವ ಭವನದಲ್ಲಿ “ವೈಜ್ಞಾನಿಕ ಕಾರ್ಯಕ್ರಮ” ಎಂಬ ವೈದ್ಯಕೀಯ ಗೋಷ್ಠಿಯ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜೀವ್ ಗಾಂಧಿ ವಿವಿಯ ಮಾಜಿ ಉಪಕುಲಪತಿ ಡಾ.ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಲುಮ್ನಿ ಸಂಘದ ಅಧ್ಯಕ್ಷ ಡಾ.ಜಿ.ಮರುಳಸಿದ್ದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯಕೀಯ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಹಳೆಯ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ಅನೇಕ ವೈದ್ಯಕೀಯ ತಜ್ಞರು ಆಗಮಿಸಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ನಂತರ ಸಂಜೆ 5.30ಕ್ಕೆ ‘ಮಾ ಉತ್ಸವ್-2016’ ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣದ ನಿರ್ದೇಶಕ ಡಾ.ಎಸ್. ಸಚ್ಚಿದಾನಂದ, ರಾಜೀವ್ ಗಾಂಧಿ ವಿವಿಯ ಮಾಜಿ ಉಪಕುಲಪತಿ ಡಾ.ಚಂದ್ರಶೇಖರ್ ಶೆಟ್ಟಿ, ಮೈಸೂರು ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ ಮತ್ತಿತರ ಗಣ್ಯರು ಹಾಜರಿರುತ್ತಾರೆ ಎಂದು ಹೇಳಿದರು.

ಡಿ.11 ರಂದು ಮಧ್ಯಾಹ್ನ 2 ಗಂಟೆಗೆ ‘ಮಾ ಉತ್ಸವ-2016’ ರ ಸಮಾರೋಪ ಸಮಾರಂಭವಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರು ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ ಹಾಜರಿರುತ್ತಾರೆ. ಈ ಸಂದರ್ಭದಲ್ಲಿ 15 ರಿಂದ 20 ಹಿರಿಯ ವೈದ್ಯಾಧಿಕಾರಿಗಳಿಗೆ ಸನ್ಮಾನ ಮಾಡಲಾಗುತ್ತದೆ. ನಂತರ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಲುಮ್ನಿ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಡಾ.ಬಿ.ಎಸ್. ಮಂಜುನಾಥ್, ಎಸ್.ಪಿ.ಯೋಗಣ್ಣ, ರಾಜಣ್ಣ, ಡಾ.ಪಿ.ಮಾಲೇಗೌಡ, ಹರೀಶ್ ಹಾಜರಿದ್ದರು.

Leave a Reply

comments

Related Articles

error: