ಮೈಸೂರು

ದೇಶದಾದ್ಯಂತ ಒಂದು ಶಿಕ್ಷಣ, ಒಂದು ಜಾತಿ ಏಕೆ ಮಾಡಲು ಸಾಧ್ಯವಿಲ್ಲ : ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ

ಮೈಸೂರು ಜ.14: -ಕೇಂದ್ರ ಸರ್ಕಾರ ಒಂದು ದೇಶ ಒಂದು ತೆರಿಗೆ ಎಂದು ಏಕರೂಪ ತೆರಿಗೆ ಪದ್ದತಿ ಜಾರಿಗೆ ತಂದಿದ್ದು, ಅದೇ ರೀತಿ ದೇಶದಾದ್ಯಂತ ಒಂದು ಶಿಕ್ಷಣ, ಒಂದು ಜಾತಿ ಏಕೆ ಮಾಡಲು ಸಾಧ್ಯವಿಲ್ಲ ಎಂದು ಶ್ರೀ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.

ಬುದ್ದ ಸ್ನೇಹ ಬಳಗದ ವತಿಯಿಂದ ಭಾನುವಾರ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಣ್ಣಯ್ಯ(ಗಣೇಶ್) ಲಕ್ಕೂರು ರಚಿಸಿರುವ `ಭಾರತದ ಬಹುಜನರ ಸಂಕ್ಷಿಪ್ತ ಇತಿಹಾಸ (ಸಂಗ್ರಹ)’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಭಾರತ ದೇಶ ಬಹುಜನರ ದೇಶ. ಆದರೆ ಪ್ರಸ್ತುತ ದಿನಗಳಲ್ಲಿ ಕೆಂಪು ಕೋಟೆ, ನ್ಯಾಯಾಲಯ ಸೇರಿದಂತೆ ಎಲ್ಲವೂ ಕೇಸರಿಮಯವಾಗುತ್ತಿದೆ. ಬಹುತ್ವವನ್ನು ನಾಶಗೊಳಿಸಿ, ಏಕತ್ವವನ್ನೂ ಹೇರುವ ಪ್ರಯತ್ನ ನಡೆಯುತ್ತಿದೆ. ಭಾರತೀಯರ ಮನಸ್ಸು, ಹೃದಯ, ಭಾವನೆ ಎಲ್ಲವೂ ಬಹುತ್ವ ಸಂಸ್ಕೃತಿ. ಈ ಸಂಸ್ಕೃತಿಯನ್ನು ನಾಶ ಮಾಡಿ ಏಕತ್ವ ಸಂಸ್ಕೃತಿಯನ್ನು ಮಾಡಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇಂದು ಭಾರತ ರೌರವ ನರಕದಲ್ಲಿದೆ. ಯಾರ ಕೈನಲ್ಲಿ ಅಧಿಕಾರ ಸಿಕ್ಕಿದೆ. ಯಾರಿಗೆ ಅಧಿಕಾರ ನೀಡಿದ್ದೇವೆ ಎಂದು ಚಿಂತಕರು ಆಲೋಚನೆ ಮಾಡಿ, ಭಾರತವನ್ನು ಮತ್ತೆ ಬಹುತ್ವದ ನಾಡಾಗಿ ಮಾಡಲು ಪ್ರಯತ್ನಿಸಬೇಕೆಂದ ಅವರು, ಅಲಿಖಿತ ಸಂವಿಧಾನ ದರ್ಬಾರ್ ನಡೆಸುತ್ತಿದ್ದು, ನ್ಯಾಯಾಧೀಶರೇ ಅಖಂಡತೆಗೆ ಧಕ್ಕೆಯಾಗುತ್ತಿದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಇನ್ನಾದರೂ ದೇಶದ ಜನರು ಎಚ್ಚೆತ್ತುಕೊಳ್ಳಬೇಕು ಎಂದರು. ಭಾರತ ದ್ರಾವಿಡರ ಭಾರತ. ದ್ರಾವಿಡರು ಮೂಲ ವಾರಸುದಾರರು. ಹೀಗಿರುವಾಗ ಏಕ ಸಂಸ್ಕೃತಿ ನಿರ್ಧಾರ ಮಾಡಲು ಇವರಿಗೆ ಅಧಿಕಾರ ನೀಡಿದವರ್ಯಾರು ಎಂದು ಪ್ರಶ್ನಿಸಿದರು.

ಹೆಣಗಳ ಮೇಲೆ ರಾಜಕಾರಣ ಮಾಡುತ್ತಿದ್ದು, ಇಂತಹ ನೀಚ ರಾಜಕಾರಣದಿಂದಾಗಿ ಪ್ರಬುದ್ಧ ಭಾರತ ನತದೃಷ್ಟ ಭಾರತವಾಗಿ ಬದಲಾಗಿದೆ. ಇಲ್ಲಿ ಹಿಂದೂ ಅಥವಾ ಮುಸ್ಲಿಂ ಹೆಣ ಸಿಕ್ಕರೆ ಸಾಕು, ಜಾತಿ, ಧರ್ಮದ ಹೆಸರಲ್ಲಿ ಬೆಂಕಿ ಹಚ್ಚುತ್ತಾರೆ. ಬುದ್ದ ಬಸವ, ಅಂಬೇಡ್ಕರ್, ಜ್ಯೋತಿ ಬಾ ಪುಲೆ, ಕನಸಿನ ಭಾರತವನ್ನಾಗಿರಲು ಬಿಡುತ್ತಿಲ್ಲ ಎಂದು ವಿಷಾದಿಸಿದರು.

ಸಂಸತ್ ಭವನ, ನ್ಯಾಯಾಲಯವೇ ಕೇಸರಿಕರಣವಾಗಿರುವಾಗ ಬಹುತ್ವ ಕಾಪಾಡಿಕೊಳ್ಳುವವರು ಯಾರು ಎಂದ ಅವರು, ಪ್ರಜಾಪ್ರಭುತ್ವ ನಕಲಿ ಪ್ರಜಾಪ್ರಭುತ್ವವಾಗಿದೆ. ಕಪಟಿ, ಕ್ರೂರಿ, ನಯವಂಚಕರ ಕೈನಲ್ಲಿ ಪ್ರಜಾಪ್ರಭುತ್ವ ಇದೆ. ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಪ್ರಜಾಪ್ರಭುತ್ವ ಬದಲಾಗಿದೆ ಎಂದರು. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.

ಸಿಂದೂ ನಾಗರಿಕತೆಯಿಂದ ಇಲ್ಲಿಯವರೆಗೆ ದೇಶ ಕಟ್ಟಿದವರು, ಮನುವಾದಿಗಳಲ್ಲ. ಮಾನವತಾವಾದಿಗಳು. ನಿಮಗೆ ದೇಶ ಇಷ್ಟವಿಲ್ಲವಾದರೆ ದೇಶ ಬಿಟ್ಟು ತೊಲಗಿ. ಇಲ್ಲಿ ಧರ್ಮ ಮುಖ್ಯವಲ್ಲ. ದೇಶ ಮುಖ್ಯ. ಧರ್ಮಗಳು ದೇಶವನ್ನು ರಕ್ಷಣೆ ಮಾಡಿಲ್ಲ. ದೇಶವನ್ನು ರಕ್ಷಿಸುತ್ತಿರುವುದು ಸಂವಿಧಾನ ಎಂದು ತಿಳಿಸಿದರು.

ಪ್ರಸ್ತುತ ಮನು ಸಂವಿಧಾನ ಹೇರಲು ಮುಂದಾಗಿದ್ದಾರೆ. ನಮ್ಮ ಸಂಸ್ಕೃತಿ ನಾಶವಾಗುವ ನಿಟ್ಟಿನಲ್ಲಿ ಸಾಗುತ್ತಿದ್ದು, ಸಂಸ್ಕೃತಿ ನಾಶವಾದರೆ ನಾವು ನಾಶವಾದಂತೆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಬೌದ್ಧ ಚಿಂತಕರು ದೇಶದೆಲ್ಲೆಡೆ ಹುಟ್ಟಿಕೊಳ್ಳಬೇಕು. ಮನುಷ್ಯರ ಭಾರತ ಬೇಕಾಗಿದೆ. ಇಂತಹ ದೇಶವನ್ನು ಕಟ್ಟುವ ಜವಾಬ್ದಾರಿ ಬಹುಜನರ ಕೈನಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೃಷಿ ಮಾರಾಟ ಇಲಾಖೆ ಅಪರ ನಿರ್ದೇಶಕ ಆರ್.ಎನ್.ಚಾಮರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಆರ್.ಮಹದೇವಪ್ಪ, ನಿಜದನಿ ಪ್ರಕಾಶನ ಶಾಂತರಾಜು, ಬಿವಿಎಸ್ ನಗರ ಸಂಯೋಜಕ ಗಣೇಶ್ ಮೂರ್ತಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: