ಮೈಸೂರು

ವರುಣಾದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿ : ಚಂದ್ರಮಿಶ್ರಾ

ಮೈಸೂರು,ಜ.14-ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ 20 ಸಾವಿರ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಶೂನ್ಯ ನಿರುದ್ಯೋಗ ಮಾದರಿ ಸಂಚಾಲಕ ಚಂದ್ರಮಿಶ್ರಾ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜ. 11ರಂದು ನಮ್ಮ ಮೇಲೆ ಹಲ್ಲೆ ನಡೆಸುವ ಮೂಲಕ ಸಂಕ್ರಾಂತಿ ಉಡುಗೊರೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ನಾವು ವರುಣಾ ಕ್ಷೇತ್ರಕ್ಕೆ ಸಂಕ್ರಾಂತಿ ಕೊಡುಗೆಯಾಗಿ ಉದ್ಯೋಗ ಸೃಷ್ಟಿ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.
ವರುಣ ಕ್ಷೇತ್ರದಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಲ್ಲಿ ಉಣ್ಣೆ ಕೈಗಾರಿಕೆ ಸ್ಥಾಪಿಸಲಿದ್ದೇವೆ. ಇದಕ್ಕೆ ಕೈಗಾರಿಕೋದ್ಯಮಿಗಳ ಸಲಹೆ ಪಡೆಯಲಾಗುವುದು. ಬ್ಯಾಂಕುಗಳಿಂದ ಹಣಕಾಸು ನೆರವು ಪಡೆದು ಕೈಗಾರಿಕೆ ಆರಂಭಿಸಲಾಗುವುದು. ಅಮೂಲ್ ಸಂಸ್ಥೆಯ ರೀತಿ ಉತ್ಪಾದಕರೇ ಕೈಗಾರಿಕೆ ಮುನ್ನಡೆಸಲಿದ್ದಾರೆ. ಇದರಿಂದ 20 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ದೊರೆಯಲಿದೆ. ಪರೋಕ್ಷವಾಗಿ 10 ಲಕ್ಷ ಜನರಿಗೆ ಲಾಭವಾಗಲಿದೆ ಎಂದು ತಿಳಿಸಿದರು.
ಜತೆಗೆ ಉಣ್ಣೆಯನ್ನು ಹೆಚ್ಚಾಗಿ ನೀಡುವ ಕುರಿಗಳನ್ನು ಸಾಕುವ ಬಗ್ಗೆ ಅರಿವು ಮೂಡಿಸಲಾಗುವುದು. ವರ್ಷಕ್ಕೆ 2 ಬಾರಿ ಉಣ್ಣೆ ನೀಡುವ, ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಉಣ್ಣೆ ನೀಡುವ ಮರೀನೋ ತಳಿಯ ಕುರಿಗಳನ್ನು ಪರಿಚಯಿಸಿ ಅವುಗಳನ್ನು ಸಾಕಲು ನೆರವು ನೀಡಲಾಗುವುದು. ಒಟ್ಟಾರೆ ಸಾಮಾಜಿಕ ಮತ್ತು ವಾಣಿಜ್ಯ ಉದ್ಯಮಿಗಳನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಯುವಕರ ಕ್ರಿಯಾ ಸಮೂಹಗಳನ್ನು ರಚಿಸಿ ವಿವಿಧ ವಲಯಗಳ ನುರಿತ ಉದ್ಯಮಿಗಳ ನೇತೃತ್ವದಲ್ಲಿ ಅವರಿಗೆ ಅಗತ್ಯವಾದ ತರಬೇತಿ, ಕೌಶಲ್ಯವನ್ನು ಒದಗಿಸಿ, ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗುವಂತೆ ಮಾಡಿ ಮಾರುಕಟ್ಟೆ ಸೌಲಭ್ಯ, ತಾಂತ್ರಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ, ಡಾ.ಮಾರ್ಕಂಡೇಯ್ ಜೇಡರ್, ನವೀನ್, ರಾಜೇಶ್, ದೇವದಾಸ್ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: