ಮೈಸೂರು

ಕಾರ್ಮಿಕರ ಭವಿಷ್ಯ ನಿಧಿಯ ಬಗ್ಗೆ ಜಾಗೃತಿ ಹಾಗೂ ಸಂವಾದ

ಮೈಸೂರು,ಜ.17-ಹೋಟೆಲ್ ಮಾಲೀಕರ ಸಂಘದ ವತಿಯಿಂದ ನಗದ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿಯ ಕಚೇರಿಯ ಡಾ.ಜಗನ್ನಾಥ್ ಶೆಣೈ ಸಭಾಂಗಣದಲ್ಲಿ ಬುಧವಾರ ಕಾರ್ಮಿಕರ ಭವಿಷ್ಯ ನಿಧಿಯ ಬಗ್ಗೆ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕರ ಭವಿಷ್ಯನಿಧಿ ಇಲಾಖೆ ಮನೋಜ್ ಪ್ರಭು, ಒಂದು ಸಂಸ್ಥೆಯಲ್ಲಿ 18ಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರೆ ಆ ಸಂಸ್ಥೆ ಕಡ್ಡಾಯವಾಗಿ ಕಾರ್ಮಿಕರಿಗೆ ಭವಿಷ್ಯನಿಧಿ ಸೌಲಭ್ಯ ನೀಡಬೇಕು. ಒಬ್ಬ ಕಾರ್ಮಿಕನಿಗೆ ಕೇಂದ್ರ ಸರ್ಕಾರ ಶೇ.8.4 ರಷ್ಟು, ಮಾಲೀಕರು ಶೇ.3.6 ರಷ್ಟು ಹಣಹಾಕಿದರೆ, ಕಾರ್ಮಿಕರಿಂದ ಶೇ.12 ರಷ್ಟು ಹಣವನ್ನು ಕಾರ್ಮಿಕರ ಭವಿಷ್ಯ ನಿಧಿಗೆ ಭರಿಸಿಕೊಳ್ಳಲಾಗುವುದು. ಕಾರ್ಮಿಕ ನಿವೃತ್ತಿ ಹೊಂದಿದ ನಂತರ ಆ ಹಣವನ್ನು ಪಿಂಚಣಿ ರೂಪದಲ್ಲಿ ನೀಡಲಾಗುವುದು ಎಂದರು.

ಕಾರ್ಮಿಕ ಭವಿಷ್ಯ ನಿಧಿಗೆ ಅರ್ಜಿ ಸಲ್ಲಿಸುವುದನ್ನು ಈಗ ಸುಲಭ ಮಾಡಲಾಗಿದ್ದು, ಆನ್ ಲೈನ್ ನಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ಮಿಕ ಭವಿಷ್ಯ ನಿಧಿಗೆ ನೋಂದಣಿಗೊಂಡ ಮೇಲೆ ಏಳು ವರ್ಷದ ನಂತರ ಕಾರ್ಮಿಕರು ವಿವಿಧ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಆ ಹಣವನ್ನು ಕಾರ್ಮಿಕರು ಮಾಡಿರುವ ನಾಮೀನಿದಾರರಿಗೆ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಕಾರ್ಮಿಕರ ಭವಿಷ್ಯ ನಿಧಿಯ ಬಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕಾರ್ಮಿಕರ ಭವಿಷ್ಯನಿಧಿ ಇಲಾಖೆ ಸಕ್ಷಮ ಅಧಿಕಾರಿ ಆನಂದ್, ತಾಂತ್ರಿಕ ಮುಖ್ಯಸ್ಥ ಎಸ್.ಸಂಪತ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಉಪಾಧ್ಯಕ್ಷರಾದ ಎನ್.ಎಸ್.ಗೋಪಾಲಕೃಷ್ಣ, ಸುರೇಶ್, ಕಾರ್ಯದರ್ಶಿ ಎ.ಆರ್.ರವೀಂದ್ರ ಭಟ್ ಉಪಸ್ಥಿತರಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: