ಕರ್ನಾಟಕ

ತೊಗಾಡಿಯಾ ಬೆದರಿಕೆಯ ಸಾಕ್ಷ್ಯವನ್ನು ಬಹಿರಂಗ ಪಡಿಸಲಿ : ಅಲ್ಲಾರಂಡ ವಿಠಲ್ ನಂಜಪ್ಪ ಆಗ್ರಹ

ರಾಜ್ಯ(ಮಡಿಕೇರಿ) ಜ.17 : ವಿಶ್ವ ಹಿಂದೂ ಪರಿಷತ್ ಮುಖಂಡರಾದ ತೊಗಾಡಿಯ ಅವರು ತಮಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದು, ಈ ಬಗ್ಗೆ ಸಾಕ್ಷ್ಯಗಳ ಸಹಿತ ಬಹಿರಂಗ ಪಡಿಸಲಿ ಎಂದು ಪ್ರಗತಿಪರ ಚಿಂತಕರ ವೇದಿಕೆಯ ಸಂಚಾಲಕರಾದ ಅಲ್ಲಾರಂಡ ವಿಠಲ್ ನಂಜಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆದರಿಕೆ ಯಾರಿಂದ ಇದೆ ಎನ್ನುವುದನ್ನು ತೊಗಾಡಿಯ ಅವರು ಆದಷ್ಟು ಬೇಗ ಮಾಡಿದರೆ ಬಹಿರಂಗಗೊಳಿಸಿದರೆ ಚಿಂತಕರಾದ ದಾಬೊಲ್ಕರ್ ಡಾ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಇವರ ಹತ್ಯೆಯ ಕಾರಣಗಳು ಮತ್ತು ಹಂತಕರು ಯಾರು ಎನ್ನುವುದು ಕೂಡ ತಿಳಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಪ್ರಗತಿಪರ ಚಿಂತಕರಾದ ನಾವುಗಳು ಸಂಘ ಪರಿವಾರದ ಸಂಘಟನಾ ಸಾಮರ್ಥ್ಯವನ್ನು ಯಾವತ್ತೋ ಮೆಚ್ಚಿಕೊಂಡಿದ್ದೇವೆ. ಪರಿವಾರ ಬೆಳೆದು ಬಂದ ದಾರಿಯಲ್ಲಿ ಬದ್ಧತೆ ಮತ್ತು ವ್ಯವಸ್ಥೆಗಳು ಅಚ್ಚುಕಟ್ಟಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪರಿವಾರದ ಕೊಂಬೆಗಳು ವಿ.ಹೆಚ್.ಪಿ. ಭಜರಂಗದಳ ಬಿಜೆಪಿ ಇತ್ಯಾದಿಗಳು ಕಾರ್ಯನಿರ್ವಹಿಸುತ್ತಿವೆಯಾದರೂ ಅವುಗಳು ಒಂದೇ ಮೆದುಳಿನಿಂದ ಕಾರ್ಯನಿರ್ವಹಿಸುತ್ತದೆ. ಇದೀಗ ಆಶ್ಚರ್ಯ ಮತ್ತು ಅಘಾತಕಾರಿ ಸುದ್ದಿ ವಿ.ಹೆಚ್.ಪಿ. ಮುಖಂಡ ತೊಗಾಡಿಯರವರು ಆಪತ್ತಿನಲ್ಲಿರುವುದು ನಮಗಳಿಗೂ ದುಃಖ ತಂದಿದೆ. ವೈಚಾರಿಕವಾಗಿ ವಿಚಾರ ಭಿನ್ನಾಭಿಪ್ರಾಯಗಳಲ್ಲಿ ನಾವು ಉತ್ತರ ದಕ್ಷಿಣದವರೇ ಹೌದು. ತೊಗಾಡಿಯ ಆಪತ್ತಿನಲ್ಲಿದ್ದಾರೆ ಎಂಬುದನ್ನು ಈ ದೇಶ ಊಹಿಸಿಕೊಳ್ಳಲೇ ಕಷ್ಟವಾಗಿದೆ ಎಂದು ವಿಠಲ್ ನಂಜಪ್ಪ ತಿಳಿಸಿದ್ದಾರೆ.

ತೊಗಾಡಿಯರ ಸಿದ್ದಾಂತಗಳನ್ನು ನಾವು ಒಪ್ಪುವುದಿಲ್ಲ. ಆದರೆ ಆ ಜೀವವನ್ನು ಅವರ ಸಂಘಟನಾ ಸಾಮಥ್ರ್ಯ ಅವರ ವಿಚಾರ ಮಂಡನೆಯ ರೀತಿಯನ್ನು ಮೆಚ್ಚುತ್ತೇವೆ. ಅಹಮದಬಾದ್‍ನಲ್ಲಿ ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಾಟೇಲ್ ತೊಗಾಡಿಯರವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರತ್ತ ಬೊಟ್ಟು ಮಾಡಿದ್ದಾರೆ. ಮೋದಿ ಮತ್ತು ಅಮಿತ್‍ಶಾ ಯಾವೆಲ್ಲಾ ಪಿತೂರಿ ನಡೆಸುತ್ತಾರೆ ಎಂಬುದಾಗಿ ಗೊತ್ತಿದೆ ಎಂಬ ಹೇಳಿಕೆ ನೀಡಿರುವುದು ಹತ್ತು ಹಲವು ರೀತಿಯ ಯೋಚನೆಗಳಿಗೆ ದಾರಿ ಮಾಡಿ ಕೊಟ್ಟಿದೆ ಎಂದು ವಿಠಲ್ ನಂಜಪ್ಪ ಆರೋಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶವಗಳೊಂದಿಗೆ ಸಂಭ್ರಮಿಸಿದನ್ನು ಮತ್ತು ನಟ ಪ್ರಕಾಶ್ ರೈ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಶಿರಸಿಯಲ್ಲಿನ ಮಠ ಒಂದರ ಆವರಣ ಹಾಗೂ ಕಾರ್ಯಕ್ರಮದ ವೇದಿಕೆಯನ್ನು ಗೋಮೂತ್ರದಿಂದ ಶುದ್ಧಿಕರಿಸಿರುವ ಬಿಜಿಪಿ ಕಾರ್ಯಕರ್ತರ ನಡವಳಿಕೆಯನ್ನು ವೇದಿಕೆ ಖಂಡಿಸುತ್ತದೆ ಎಂದು ಅವರು ತಿಳಿಸಿದರು. ಸಾಮಾಜಿಕ ಜೀವನದಲ್ಲಿ ಶಾಂತಿ ಬಯಸುವ ನಮಗೆ ಈ ಎಲ್ಲಾ ವಿಚಾರಗಳು ಆಘಾತಕಾರಿಯಾಗಿದೆ. ಸಂಘ ಪರಿವಾರ ಉಡುಪಿ, ಮೈಸೂರು ರಂಗಾಯಣದಲ್ಲೂ ಗೋಮೂತ್ರ ಶುದ್ದೀಕರಣ ಮಾಡಿತ್ತು. ಅವರುಗಳು ದಯವಿಟ್ಟು ಗೋಮೂತ್ರವನ್ನು ಅವರ ಅಂತರಂಗಕ್ಕೆ ಸಿಂಪಡಿಸಿಕೊಂಡು ಅಂತರಂಗ ಶುದ್ದೀಕರಿಸಿಕೊಳ್ಳಲಿ ಎಂದು ವಿಠಲ್ ನಂಜಪ್ಪ ಒತ್ತಾಯಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: