ಕರ್ನಾಟಕಪ್ರಮುಖ ಸುದ್ದಿ

ಚಿರನಿದ್ರೆಗೆ ಜಾರಿದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ಕಾಶೀನಾಥ್

ರಾಜ್ಯ(ಬೆಂಗಳೂರು)ಜ.18:- ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಚಿರನಿದ್ರೆಗೆ ಜಾರಿದ್ದಾರೆ. ಕನ್ನಡ ಚಿತ್ರರಂಗದ ತಾರೆಯೊಂದು ಮರೆಯಾಗಿದೆ.  ಅನಾರೋಗ್ಯದಿಂದ ಬಳಲುತ್ತಿದ್ದ ಕಾಶೀನಾಥ್  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರಿನಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು.   ಇತ್ತೀಚಿಗೆ ನಂದ ಕಿಶೋರ್ ನಿರ್ದೆಶನದ ಚೌಕಾ ಚಿತ್ರದಲ್ಲೂ ನಟಿಸಿದ್ದರು. ಅನಾರೋಗ್ಯದ  ಕಾರಣ ಕಳೆದ 2 ದಿನಗಳಿಂದ ಶ್ರೀ ಶಂಕರ  ಕ್ಯಾನ್ಸರ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಬಹಳ ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ ಅನಾರೋಗ್ಯ  ಹೆಚ್ಚಿತ್ತು. ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕನ್ನಡದಲ್ಲಿ 11,ಹಿಂದಿ ಮತ್ತು ತೆಲುಗಿನಲ್ಲಿ ತಲಾ 1 ಸಿನಿಮಾ ನಿರ್ದೇಶನ ಮಾಡಿದ್ದರು. ಚೌಕ ಸಿನಿಮಾ ಅವರ ನಟನೆಯ  ಕನ್ನಡದ ಕೊನೆಯ ಸಿನಿಮಾ ಆಗಿದೆ. ಉಪೇಂದ್ರ, ಮನೋಹರ್ ಸೇರಿದಂತೆ ಅನೇಕರಿಗೆ ಗಾಡ್ ಪಾದರ್ ಆಗಿದ್ದರು. ಕನ್ನಡದ ಮೂರು ಸಿನಿಮಾಗಳಿಗೆ ಚಿತ್ರಗೀತೆ ರಚಿಸಿದ್ದರು.ನಟ ಉಪೇಂದ್ರ, ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅನುಭವ, ಅಜಗಜಾಂತರ, ಅನಂತನ ಅವಾಂತರ, ಅಪರಿಚಿತ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿದ್ದರು.ತಮ್ಮ ಅಮೋಘ ಅನುಭವದ ಮೂಲಕ ಕನ್ನಡ ಚಿತ್ರರಸಿಕರಿಗೆ ಕಾಶಿನಾಥ್ ಹತ್ತಿರವಾಗಿದ್ದರು. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ತಮ್ಮ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ಕೈಚಳಕ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅನುಭವಿ ನಿರ್ದೇಶಕ, ನಟನ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗದ ಹಲವು ನಟ-ನಟಿಯರು ಕಾಶೀನಾಥ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: