ಮೈಸೂರು

ಕಾನೂನು ಬಾಹಿರವಾಗಿ ಅಜೀಜ್ ಸೇಠ್ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು : ರದ್ದಿಗೆ ಆಗ್ರಹ 

ಮೈಸೂರು, ಜ. 19 : ನಗರದ ದೇವನೂರು 1 ನೇ ಹಂತ ಬಡಾವಣೆಯಲ್ಲಿ ಮುಡಾ ವತಿಯಿಂದ ನಿವೇಶನಗಳಾಗಿ ಅಭಿವೃದ್ದಿ ಪಡಿಸಿದ್ದ ಸುಮಾರು 2.10 ಎಕರೆ ಜಾಗವನ್ನು ಕಾನೂನು ಹಾಗೂ ನಿಯಮ ಬಾಹಿರವಾಗಿ ಅಜೀಜ್ ಸೇಠ್ ಭವನ ನಿರ್ಮಾಣಕ್ಕೆ ಮುಡಾ ತರಾತುರಿಯಲ್ಲಿ ಮಂಜೂರು ಮಾಡಿದ್ದು, ಕೂಡಲೇ ಅದನ್ನು ರದ್ದು ಪಡಿಸಬೇಕೆಂದು ಮೈಸೂರು ರಕ್ಷಣಾ ವೇದಿಕೆ ಅಗ್ರಹಿಸಿದೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಮೈ.ಕಾ. ಪ್ರೇಮ್‌ಕುಮಾರ್, ಭವನ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ. ಆದರೆ ನಿವೇಶನಗಳಾಗಿ ಅಭಿವೃದ್ದಿ ಪಡಿಸಿದ್ದನ್ನು ನಿವೇಶನಾಕಾಂಕ್ಷಿಗಳಿಗೆ ನೀಡದೆ ಸುಮಾರು 25 ಕೋಟಿ ಬೆಲೆ ಬಾಳುವ ಜಾಗವನ್ನು ಈಗ ಭವನ ನಿರ್ಮಾಣಕ್ಕೆ ಕಾನೂನು ಬಾಹಿರವಾಗಿ ಹಾಗೂ ಸಿಎ ನಿವೇಶನವಾಗಿ ಅದನ್ನು ಮಾರ್ಪಡಿಸಲು ಅವಕಾಶ ಇಲ್ಲದಿದ್ದರೂ ನೀಡಲಾಗುತ್ತಿದ್ದು, ಇದು ಮುಡಾದಲ್ಲಿ ನಡೆದ ಬಹುದೊಡ್ಡ ಹಗರಣವಾಗಿದೆ ಎಂದು ಅರೋಪಿಸಿದರು.

ಸಚಿವ ತನ್ವೀರ್‌ಸೇಠ್ ಅವರು ಮುಡಾ ಸದಸ್ಯರೂ ಆಗಿರುವ ಕಾರಣ ಅರ್ಜಿ ಸಲ್ಲಿಸಿ, ಪ್ರಭಾವ ಬೀರಿ ಮಂಜೂರು ಮಾಡಿಸಿಕೊಂಡಿದ್ದು, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅರ್ಜಿಯನ್ನು ತರಾತುರಿಯಲ್ಲಿ ಮುಡಾ ಸಭೆ ನಡೆಸಿ ಮಂಜುರು ಮಾಡಿಸಿಕೊಂಡಿದ್ದಾರೆ.

ಅಲ್ಲದೆ, ಈ ಹಿಂದೆ ಮಂಜೂರಾಗಿದ್ದವರಿಗೆ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಅಥವಾ ಬೇಲಿ ಹಾಕಲು ಆ ಪ್ರದೇಶದಲ್ಲಿ ನೆಲೆಸಿರುವು ಗೂಂಡಾಗಳು ಅವಕಾಶ ನೀಡದೆ ಇದ್ದು, ಇದರಿಂದಾಗಿ ಅವರಿಗೆ ಬದಲಿ ನಿವೇಶನ ನೀಡಲಾಗಿದೆ.

ಒಂದು ವೇಳೆ ಅವರು ತಮಗೆ ಮೊದಲು ಮಂಜೂರಾಗಿದ್ದ ನಿವೇಶನವೇಬೇಕೆಂದು ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೊರೆ ಹೋದಲ್ಲಿ ಇದು ಸಹಾ ಮುಡಾಕ್ಕೆ ಮತ್ತೊಂದು ಲಲಿತಾದ್ರಿಪುರ ಬಡಾವಣೆಯಂತೆ ಸಮಸ್ಯೆ ಉಂಟು ಮಾಡಲಿದೆ ಎಂದು ತಿಳಿಸಿದರು.

ಅಲ್ಲದೆ, ಆ ಪ್ರದೇಶದಲ್ಲಿ ಒಂದು ಸಮುದಾಯದ ಗೂಂಡಾಗಳು ಸ್ಕ್ರ್ಯಾಪ್ ಲೋಹದ ವ್ಯವಹಾರ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದು, ಆ ಪ್ರದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಸಹಾ ದೂರಿದರು.

ಜೊತೆಗೆ, ಒಂದು ವೇಳೆ ಮುಡಾ ಅಜೀಜ್ ಸೇಠ್ ಭವನಕ್ಕೆ ಈಗ ಕಾನೂನು ಬಾಹಿರವಾಗಿ ನಿವೇಶನ ನೀಡಿರುವುದನ್ನು ರದ್ದುಪಡಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಮೈಸೂರು ರಕ್ಷಣಾ ವೇದಿಕೆಯ ಮಹೇಶ್, ಮೋಹನ್, ಕುಮಾರಗೌಡ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: