ಕರ್ನಾಟಕಪ್ರಮುಖ ಸುದ್ದಿ

ಮಸಾಲೆದೋಸೆ ಮತ್ತು ಈರುಳ್ಳಿ ದೋಸೆ ರುಚಿ ಸವಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ(ಬೆಂಗಳೂರು)ಜ. 19:- ನಗರದ ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾಗಿರುವ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿನ ಖಾನಾವಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಸಾಲೆದೋಸೆ ಮತ್ತು ಈರುಳ್ಳಿ ದೋಸೆ ರುಚಿ ಸವಿದರು.

ಸಾವಯವ ಮತ್ತು ಸಿರಿಧಾನ್ಯಗಳನ್ನು ಬಳಸಿ ತಯಾರಿಸಲಾದ ಮಸಾಲೆದೋಸೆ ವಿದ್ಯಾರ್ಥಿ ಭವನದ ಮಸಾಲೆ ದೋಸೆಗಿಂತ ಕಡಿಮೆಯೇನಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೇಂದ್ರ ಸಚಿವ ಸದಾನಂದಗೌಡ, ಕೃಷಿ ಸಚಿವ ಕೃಷ್ಣಬೈರೇಗೌಡ ಅವರೂ ಕೂಡ ದೋಸೆಗಳ ರುಚಿ ಸವಿದರು. ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಸಾಲೆ ದೋಸೆ ಮತ್ತು ಈರುಳ್ಳಿ ದೋಸೆಗಳ ರುಚಿಯ ಬಗ್ಗೆ ಹೊಗಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಡಯಾಬಿಟಿಸ್ ಇದೆ, ಹಾಗಾಗಿ ನನ್ನ ಮನೆಯಲ್ಲೂ ಸಾವಯವ ಮತ್ತು ಸಿರಿಧಾನ್ಯಗಳನ್ನು ಬಳಸಿ ಅಡುಗೆ ಮಾಡುತ್ತಾರೆ.

ಇಂದು ಬೆಳಿಗ್ಗೆ ನವಣೆಯಿಂದ ತಯಾರಿಸಿದ ರೊಟ್ಟಿ ತಿಂದು ಬಂದಿದ್ದೇನೆ. ಒಮ್ಮೊಮ್ಮೆ ರೈಸ್ ಬಾತ್ ಕೂಡ ಮಾಡುತ್ತಾರೆ ಎಂದರು.

ಚಿಕ್ಕವಯಸ್ಸಿನಲ್ಲಿ ಮನೆಗಳಲ್ಲಿ ನವಣೆ, ಸಾಮೆ, ಆರ್ಕ ಬೆಳೆಗಳನ್ನು ಬಳಸಿಯೇ ಆಹಾರಗಳನ್ನು ತಯಾರಿಸಿ ನೀಡುತ್ತಿದ್ದರು ಎಂದು ನೆನಪು ಮಾಡಿಕೊಂಡರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: