Uncategorized

ಟ್ರಿಣ್ ಟ್ರಿಣ್ ಸೈಕಲ್ ಏರಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಿದ ಜಲ್ಲಾಧಿಕಾರಿ ಡಿ.ರಂದೀಪ್

ಮೈಸೂರು,ಜ.21:-  ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಡಿ. ರಂದೀಪ್ ಟ್ರಿಣ್…. ಟ್ರಿಣ್… ಸೈಕಲ್ ಏರಿ ನಗರ ಪ್ರಮುಖ ರಸ್ತೆಗಳಲ್ಲಿ ಚಲಿಸುವುದರ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.

ಭಾನುವಾರ ಬೆಳಿಗ್ಗೆ  ಅವರು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಟ್ರಿಣ್… ಟ್ರಿಣ್… ಸೈಕಲ್ ಏರಿ ಚಾಮರಾಜ ಜೋಡಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿವರೆಗೆ ಸಾಗಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಈ ತಿಂಗಳ ಅಂತ್ಯದವರೆಗೆ ಸ್ವಚ್ಛ ಸರ್ವೇಕ್ಷಣಾ ಕಾರ್ಯ ಮುಂದುವರೆಯಲಿದ್ದು ಪ್ರತಿದಿನ ಒಂದೊಂದು ರೀತಿಯಲ್ಲಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಹಿಂದೆ 2 ಬಾರಿ ಸ್ವಚ್ಛನಗರಿ ಎಂಬ ಬಿರುದು ಪಡೆದಿದ್ದ ಮೈಸೂರು ನಗರವು ಮತ್ತೆ ಗತ ವೈಭವವನ್ನು ಕಾಣಲು ಸಿದ್ಧವಾಗುತ್ತಿದೆ. ಈ ದಿಸೆಯಲ್ಲಿ ಸಾರ್ವಜನಿಕರು ನಗರಪಾಲಿಕೆ ಹಾಗೂ ಜಿಲ್ಲಾಡಳಿತಗಳೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಪರಿಸರ ಸಂರಕ್ಷಣೆಗಾಗಿ ಸೈಕಲ್ ಬಳಕೆ ಅತ್ಯಗತ್ಯವಾಗಿದೆ ಸೈಕಲ್ ಬಳಸುವುದರಿಂದ ಮನುಷ್ಯರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ವ್ಯಾಯಾಮ ದೊರಕುವುದಲ್ಲದೇ, ಆರೋಗ್ಯವು ಲಭಿಸುತ್ತದೆ. ಹಾಗಾಗಿ ಟ್ರಿಣ್… ಟ್ರಿಣ್… ಯೋಜನೆಯನ್ನು ನಗರದಾದ್ಯಂತ ಜಾರಿಗೊಳಿಸಿದ್ದು, ಇದಕ್ಕೆ ಯುವ ಜನತೆ ಹೆಚ್ಚಿನ ಪ್ರಮಾಣದಲ್ಲಿ ಸ್ಪಂದಿಸುತ್ತಿರುವುದು ಸಂತಸ ತರುವ ವಿಷಯವಾಗಿದೆ. ಇದೇ ಪ್ರಥಮ ಬಾರಿಗೆ ಸ್ವಚ್ಛತೆಗಾಗಿ ಟ್ರಿಣ್ ಟ್ರಿಣ್ ಸೈಕಲ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಟ್ರಿಣ್ ಟ್ರಿಣ್ ಸೈಕಲ್ ಸೌಲಭ್ಯ ಬಯಸುವ ಆಸಕ್ತರು ದೂ. ಸಂ. 1969ಕ್ಕೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಸ್ವಚ್ಛತೆಯ ಬಗ್ಗೆ ನಗರಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ. ಮಾದೇಗೌಡ, ಪಾಲಿಕೆ ಆಯುಕ್ತ ಜಗದೀಶ್. ಶಾಸಕ ಎಂ.ಕೆ. ಸೋಮಶೇಖರ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: